ಗಂಗಾಭಾಗೀರಥಿ ಹಾಗೂ ಚನ್ನಸೋಮೇಶ್ವರ ರಥೋತ್ಸವ ರದ್ದು
ಚಿಕ್ಕಬಳ್ಳಾಪುರ: ಕೊರೊನಾ ಮೂರನೇ ಅಲೆ ಹಾಗೂ ಓಮಿಕ್ರಾನ್ ತಡೆಗೆ ಸರ್ಕಾರ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ವಿಧಿಸಿರುವ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮುದುಗಾನಕುಂಟೆ ಹಾಗೂ ಅಲಕಾಪುರ ಶ್ರೀ ಚನ್ನಸೋಮೇಶ್ವರ ದೇವಾಲಯದ ರಥೋತ್ಸವವನ್ನು ರದ್ದು ಮಾಡಲಾಗಿದೆ. ಗೌರಿಬಿದನೂರು ತಾಲೂಕಿನ ತಹಶೀಲ್ದಾರ್ರದ್ದು ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ಜನರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಜೊತೆಗೆ ಸರ್ಕಾರ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ನಿಯಮಾಸಾರ ಜಾತ್ರಾ ಮಹೋತ್ಸವವನ್ನು ನಿಲ್ಲಿಸಲಾಗಿದೆ ಎಂದಿದ್ದಾರೆ. ಪ್ರತೀ ಸೋಮವಾರ ಮುದುಗಾನಕುಂಟೆ ಗಂಗಾಭಾಗೀರಥಿ ದೇವಾಲಯಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. ಪಕ್ಕದ ಆಂಧ್ರಪ್ರದೇಶದಿಂದ ಕೂಡ ಭಕ್ತಾದಿಗಳು ಬರುವ ಸಾಧ್ಯತೆಯಿದ್ದು ಪ್ರತಿ ವಾರ ಸಾವಿರಾರು ಜನ ಒಂದಡೆ ಸೇರಿ ಪೂಜಾ-ಕೈಂಕರ್ಯಗಳನ್ನು ಮಾಡುವ ಪದ್ದತಿಯಿದೆ. ಇದರಿಂದ ಕೊರೊನಾ ಹರಡುವಿಕೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಮತ್ತೊಂದೆಡೆ ಗೌರಿಬಿದನೂರು ತಾಲೂಕಿನ ಸುಪ್ರಸಿದ್ದ ದೇವಾಲಯ ಶ್ರೀಚನ್ನಸೋಮೇಶ್ವರ ಬ್ರಹ್ಮರಥೋತ್ಸವವನ್ನು ಕೂಡ ರದ್ದು ಮಾಡಲಾಗಿದೆ. ತಾಲೂಕಿನಾದ್ಯಂತ ವಿವಿಧ ಹಳ್ಳಿಗಳಿಂದ ಬರುವ ಭಕ್ತಾದಿಗಳು ಜಡೆನಂಜುಡೇಶ್ವರನ ರಥ ಎಳೆದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಲ್ಲದೆ ಜಾತ್ರಾ ದಿನ ಅನ್ನಸಂತರ್ಪಣಾ ಕಾರ್ಯಕ್ರಮ ಕೂಡ ಏರ್ಪಡಿಸಲಾಗುತ್ತದೆ. ಗಣನೀಯವಾಗಿ ಭಕ್ತರ ಸಂಖ್ಯೆ ಹೆಚ್ಚಾಗುವ ಕಾರಣದಿಂದ ಜನವರಿ 14ರಂದು ನಡೆಯುವ ಜಾತ್ರಾ ಮಹೋತ್ಸವವನ್ನು ರದ್ದು ಮಾಡಿದ್ದಾರೆ. ಅಂದು ದೇವಾಲಯದ ಮುಂದೆ ಜನಸಂದಣಿ ಸೇರುವುದಾಗಳಲೀ, ಅಂಗಡಿ-ಮುಂಗಟ್ಟು ತೆರೆಯುವುದಾಗಲೀ ಮಾಡಿದ್ರೆ ಕಾನೂನು ಕ್ರಮ ಜರುಗಿಸುವುದಾಗಿ ತಹಶೀಲ್ದಾರ್ ಸುತ್ತೋಲೆ ಹೊರಡಿಸಿದ್ದಾರೆ.