ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ; ಕಾಂಗ್ರೆಸ್ ಶಾಸಕರ ಗನ್ಮ್ಯಾನ್ ವಶಕ್ಕೆ
ಕಲಬುರಗಿ; ಪಿಎಸ್ವೈ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಅವರ ಗನ್ ಮ್ಯಾನ್ನನ್ನು ವಶಕ್ಕೆ ಪಡೆದಿದ್ದಾರೆ. ಶಾಸಕ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ, ಪಿಎಸ್ಐ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಕೋಟಾ ಹಾಗೂ ಇನ್ ಸರ್ವೀಸ್ನಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬಂದಿದ್ದರು. ಈ ಕಾರಣದಿಂದಾಗಿ ಹಣ ನೀಡಿ ಒಎಂಆರ್ ಶೀಟ್ ತಿದ್ದಿರುವ ಅನುಮಾನ ಹಯ್ಯಾಳಿ ದೇಸಾಯಿ ವಿರುದ್ಧ ಉಂಟಾಗಿದೆ. ಹೀಗಾಗಿ ಸಿಐಡಿ ಅಧಿಕಾರಿಗಳು ಶಾಸಕರ ಗನ್ಮ್ಯಾನ್ ಹಯ್ಯಾಳಿ ದೇಸಾಯಿರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹಯ್ಯಾಸಿ ದೇಸಾಯಿ 2012ರಲ್ಲಿ ಪೇದೆಯಾಗಿ ಆಯ್ಕೆಯಾಗಿದ್ದರು. ಅನಂತರ ಇತ್ತೀಚೆಗೆ ನಡೆದ ಪಿಎಸ್ಐ ಪರೀಕ್ಷೆ ಬರೆದಿದ್ದರು. ಇದರಲ್ಲಿ 200 ಅಂಕಕ್ಕೆ 138 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು. ಅವರು ಒಎಂಆರ್ ಶೀಟ್ ತಿದ್ದುರುವ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಹಯ್ಯಾಳಿ ದೇಸಾಯಿ ಅವರನ್ನು ವಶಕ್ಕೆ ಪಡೆದಿದ್ದಾರೆ.