ಹಾವಿಗೂ ಇತ್ತು ಕ್ಯಾನ್ಸರ್; ಆಪರೇಷನ್ ಮಾಡಿ ಗಡ್ಡೆ ತೆಗೆದ ಧಾರವಾಡ ವೈದ್ಯ
ಧಾರವಾಡ; ಕ್ಯಾನ್ಸರ್ ಎಂಬ ಮಹಾಮಾರಿ ಈಗ ಲಕ್ಷಾಂತರ ಜನರನ್ನು ಕಾಡುತ್ತಿದೆ. ಅದು ಮನುಷ್ಯರಿಗಷ್ಟೇ ಬರಲ್ಲ, ಪ್ರಾಣಿಗಳಿಗೂ ಬರುತ್ತದೆ ಅನ್ನೋದು ಖಾತ್ರಿಯಾಗಿದೆ. ಹಾವೊಂದಕ್ಕೂ ಕ್ಯಾನ್ಸರ್ ಬಾಧಿಸಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಕ್ಯಾನ್ಸರ್ ಗಡ್ಡೆಯನ್ನು ತೆಗೆದಿದ್ದಾರೆ.
ಧಾರವಾಡದ ಪ್ರಾಣಿ ರಕ್ಷಕ ಸೋಮಶೇಖರ್ ಚೆನ್ನಶೆಟ್ಟಿ ಅವರಿಗೆ ಮನೆಯೊಂದರಲ್ಲಿ ಹಾವು ಇರುವ ಬಗ್ಗೆ ಮಾಹಿತಿ ಬಂದಿತ್ತು. ಅವರು ಆ ಮನೆಗೆ ಹೋಗಿ ನೋಡಿದಾಗ ಅದು ವಿಷಕಾರಿ ಅಲ್ಲದ ಆಭರಣ ಅನ್ನೋದು ಗೊತ್ತಾಯಿತು. ಅದನ್ನು ಕೈಯಲ್ಲಿ ಹಿಡಿದು ನೋಡಿದಾಗ ಅದರ ತಲೆ ಮೇಲೆ ಗಡ್ಡೆ ಇರೋದು ಕಾಣಿಸಿದೆ. ಹೀಗಾಗಿ ಅವರು ಕೂಡಲೇ ಅದನ್ನು ಕೃಷಿ ವಿಶ್ವವಿದ್ಯಾಲಯದ ಪಶು ಆಸ್ಪತ್ರೆಯ ಹಿರಿಯ ವೈದ್ಯ ಡಾ. ಅನಿಲಕುಮಾರ ಪಾಟೀಲ ಬಳಿ ತೆಗೆದುಕೊಂಡು ಹೋಗಿ ತೋರಿಸಿದ್ದಾರೆ. ಪರೀಕ್ಷಿಸಿದ ವೈದ್ಯರಿಗೆ ಅದು ಕ್ಯಾನ್ಸರ್ ಗಡ್ಡೆ ಎಂದು ಗೊತ್ತಾಗಿದೆ. ಕೂಡಲೇ ಅದಕ್ಕೆ ಆಪರೇಷನ್ ಕೂಡಾ ಮಾಡಿ ಗಡ್ಡೆ ಹೊರತೆಗೆದಿದ್ದಾರೆ.
ಹಾವು ಅತ್ಯಂತ ಸೂಕ್ಷ್ಮ ಜೀವ. ಅದರ ಚರ್ಮ ಕೂಡಾ ಅದಕ್ಕಿಂತಲೂ ಸೂಕ್ಷ್ಮವಾಗಿರುತ್ತೆ. ಚಿಕಿತ್ಸೆಗೆ ಬಂದ ಹಾವನ್ನು ಪರಿಶೀಲಿಸಿದ ಡಾ.ಅನಿಲ ಕುಮಾರ್ ಪಾಟೀಲ್ ಅವರಿಗೆ ಇದು ಎಲುಬುಗಳ ಮೇಲೆ ಟ್ಯೂಮರ್ ಬೆಳೆದಿದೆ ಅಂತಾ ಅನ್ನಿಸಿದರೂ ಇನ್ನಷ್ಟು ಪರೀಕ್ಷೆಗಳನ್ನು ಮಾಡಿಸಿದಾಗ ತಲೆ ಭಾಗದಲ್ಲಿ ಬೆಳೆದ ಕ್ಯಾನ್ಸರ್ ಗಡ್ಡೆ ಅಂತಾ ಖಚಿತವಾಯಿತು.