ಬಿಜೆಪಿ ನಾಯಕರು ಬಳ್ಳಾರಿ ಋಣ ತೀರಿಸಬೇಕು: ಜನಾರ್ದನ ರೆಡ್ಡಿ
ಬಳ್ಳಾರಿ: ತಮ್ಮ ಹುಟ್ಟುಹಬ್ಬದ ದಿನದಂದು ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ನಾಯಕರಿಗೆ ತಮ್ಮ ಕರ್ತವ್ಯವನ್ನು ನೆನಪಿಸಿದ್ದಾರೆ. ತಮ್ಮ ಆಪ್ತರ ಮನೆಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿ ಮಾತನಾಡಿದ ಅವರು, ಇಂದು ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಳ್ಳಾರಿ ಕಾರಣ, ಬಿಜೆಪಿ ನಾಯಕರು ಯಾವುದೇ ಕಾರಣಕ್ಕೂ ಬಳ್ಳಾರಿಯನ್ನು ಮರೆಯಬಾರದು. ಬಳ್ಳಾರಿ ಮಣ್ಣಿನ ಋಣ ಬಿಜೆಪಿ ನಾಕಯರ ಮೇಲಿದೆ. ಇದುವರೆಗೂ ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಆದರೂ ಬಳ್ಳಾರಿ ಮಣ್ಣು ಮತ್ತು ಜನರಿಂದ ದೂರ ಇರುವ ಪರಿಸ್ಥಿತಿ ಬಂದೊದಗಿದೆ. ಬಳ್ಳಾರಿ ಅಭಿವೃದ್ದಿ ಬಗ್ಗೆ ನಾನು ಕಂಡ ಕನಸು ಕನಸಾಗಿಯೇ ಉಳಿದಿದೆ.
ರಾಜ್ಯದಲ್ಲಿ ಬಿಜೆಪಿ ಇನ್ನು ಒಂದೂವರೆ ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತೆ ಅಷ್ಟರಲ್ಲಿ ಎಲ್ಲೆ ಕೆಲಸಗಳೂ ನಡೆಯಬೇಕು. ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಎಲ್ಲ ಕೆಲಸಗಳೂ ಶುರು ಆಗಬೇಕು. ಮುಖ್ಯಮಂತ್ರಿಗಳಿಂದ ಹಿಡಿದು ಎಲ್ಲಾ ಶಾಸಕರು, ಸಚಿವರು ರಸ್ತೆಯಲ್ಲಿ ನಿಂತು ಕೆಲಸ ಮಾಡಿಸವಷ್ಟು ಋಣ ಅವರ ಮೇಲಿದೆ. ಎಲ್ಲರೂ ಇದನ್ನು ಗಂಭೀರವಾಗಿ ತೆಗೆದುಕೊಂಡು. ಅಭಿವೃದ್ದಿಯತ್ತ ಗಮನ ಹರಿಸಿ. ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿಯವರ ಮೇಲೆ ನನಗೆ ನಂಬಿಕೆಯಿದೆ. ಅವರಿಗೂ ಬಳ್ಳಾರಿ ಮೇಲೆ ಪ್ರೀತಿ ಇದೆ. ಅದನ್ನು ಕೆಲಸ ಮಾಡಿಸುವ ಮೂಲಕ ತೋರಿಸಿದ್ರೆ ಒಳ್ಳೆಯದು ಎಂದು ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.