Districts

ಕೊನೆಗೂ ನರಭಕ್ಷಕ ಹುಲಿ ಸೆರೆ; ಕಾರ್ಯಾಚರಣೆಯೇ ರೋಚಕ!

ಮೈಸೂರು; ಇತ್ತೀಚೆಗೆ ನಂಜನಗೂಡು ಬಳಿ ಮಹಿಳೆಯೊಬ್ಬರನ್ನು ಹುಲಿ ಕೊಂದುಹಾಕಿತ್ತು. ಇದಲ್ಲದೆ ಈ ಹಿಂದೆ ಕೂಡಾ ಈ ಹುಲಿಯಿಂದ ಸಾಕಷ್ಟು ಅಪಾಯಗಳಾಗಿದ್ದವು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಹರಸಾಹಸ ಪಟ್ಟು ಹುಲಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಹುಲಿ ಈಗ, ಮೈಸೂರು ಮೃಗಾಲಯ ಸೇರಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡಿಯಾಲ ಬಳಿ ಅರಣ್ಯ ಇಲಾಖೆ ಸಿಬ್ಬಂದಿ, ಹುಲಿಯನ್ನು ಸೆರೆ ಹಿಡಿದಿದ್ದಾರೆ. ಅದಕ್ಕೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ವೈದ್ಯ ಯಶಸ್ವಿಯಾಗಿದ್ದು, ಹುಲಿ ಪ್ರಜ್ಞೆ ತಪ್ಪುತ್ತಿದ್ದಂತೆ ಅದನ್ನು ಮೈಸೂರು ಮೃಗಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.

ಎರಡು ದಿನಗಳ ಹಿಂದೆ ಇದೇ ಹುಲಿ ಹಸುವೊಂದನ್ನು ಕೊಂದಿತ್ತು. ಹುಲಿ ಒಮ್ಮೆ ಬೇಟೆಯಾಡಿದ ಸ್ಥಳಕ್ಕೆ ಮತ್ತೆ ಬರುತ್ತದೆ. ಅದು ಅರಣ್ಯಾಧಿಕಾರಿಗಳಿಗೆ ಗೊತ್ತಿತ್ತು. ಈ ಕಾರಣಕ್ಕಾಗಿ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನಿಟ್ಟು ಅಧಿಕಾರಿಗಳು ಕಾದು ಕುಳಿತಿದ್ದರು. ಸಿಸಿಟಿವಿ ಕ್ಯಾಮರಾದಲ್ಲಿ ಹುಲಿಯ ಚಲನವಲನ ಪತ್ತೆಯಾಗಿತ್ತು.

ಹೀಗಾಗಿ ಅರಣ್ಯ ಸಿಬ್ಬಂದಿ ಸಮೀಪದಲ್ಲೇ ಬೋನು ಇರಿಸಿ, ಅದರಲ್ಲಿ  ವೈದ್ಯಾಧಿಕಾರಿ ಡಾ.ವಾಸಿ ಜಾಫರ್‌ ಅವರನ್ನು ಕೂರಿಸಲಾಗಿತ್ತು. ಮಧ್ಯರಾತ್ರಿ ಹುಲಿ ಬಂದಾಗ ವೈದ್ಯರು ಅರೆವಳಿಕೆ ಚುಚ್ಚು ಮದ್ದು ನೀಡಿದ್ದಾರೆ. ಇದರಿಂದಾಗಿ ಹುಲಿ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿದೆ.

ಈ ಹುಲಿ 10 ವರ್ಷದ ಗಂಡು ಹುಲಿ ಎಂದು ತಿಳಿದುಬಂದಿದೆ. ಹಲವು ದಿನಗಳಿಂದ ಜನರಿಗೆ ಇದು ತಲೆನೋವಾಗಿತ್ತು. ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸಿ, ಹುಲಿಯನ್ನು ಈಗ ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಕಾರ್ಯಾಚರಣೆಯಲ್ಲಿ 207 ಸಿಬ್ಬಂದಿ ಪಾಲ್ಗೊಂಡಿದ್ದರು. 100 ಗಿರಿಜನರು ಕೂಡಾ ಸಾಥ್‌ ನೀಡಿದ್ದರು.

ನ.24ರಂದು ಹೆಡಿಯಾಲ ವಲಯ ಅರಣ್ಯ ವ್ಯಾಪ್ತಿಯಲ್ಲಿ ಬಳ್ಳೂರು ಹುಂಡಿ ಬಳಿ ದನ ಮೇಯಿಸಲು ಹೋಗಿದ್ದ ರತ್ನಮ್ಮ (55) ಎಂಬ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ ಆಕೆಯನ್ನು ಕೊಂದು ಹಾಕಿತ್ತು.

Share Post