ಬಾಲರಾಮನ ಮೂರ್ತಿಗೆ ಬಳಸಿದ ಕಲ್ಲಿಗೆ 80 ಸಾವಿರ ರೂ. ದಂಡ ವಿವಾದ; ಬಿಜೆಪಿಯಿಂದ ಪಾವತಿಸಲು ನಿರ್ಧಾರ!
ಮೈಸೂರು; ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ಬಾಲರಾಮನ ವಿಗ್ರಹಕ್ಕೆ ಬಳಸಿರುವ ಕೃಷ್ಣಶಿಲೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ಜಮೀನೊಂದರಲ್ಲಿ ಸಿಕ್ಕಿದ್ದು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಜಮೀನಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ಇಲ್ಲದೆ ಕಲ್ಲನ್ನು ತೆಗೆದಿರುವುದಕ್ಕೆ ಗುತ್ತಿಗೆದಾರನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 80 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಇದೀಗ ಈ ಹಣವನ್ನು ಗುತ್ತಿಗೆದಾರನಿಗೆ ಬಿಜೆಪಿ ಪಕ್ಷದಿಂದ ನೀಡಲು ನಿರ್ಧರಿಸಲಾಗಿದೆ.
ಮೈಸೂರಿನಲ್ಲಿ ಮಾತನಾಡಿರುವ ಸಂಸದ ಪ್ರತಾಪ ಸಿಂಹ, ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಅವರಿಗೆ 80 ಸಾವಿರ ರೂಪಾಯಿ ಹಣವನ್ನು ಬಿಜೆಪಿ ವತಿಯಿಂದ ನೀಡೋದಾಗಿ ಪ್ರಕಟಿಸಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗುಜೇಗೌಡನಪುರ ಗ್ರಾಮದ ರಾಮದಾಸ್ ಅವರ ಜಮೀನಿನಲ್ಲಿ ಈ ಕೃಷ್ಣಶಿಲೆ ಸಿಕ್ಕಿತ್ತು. ಅಂದಹಾಗೆ, ಈ ಭೂಮಿಯ ನೆಲ ಸಮತಟ್ಟು ಮಾಡೋದಕ್ಕಾಗಿ ರಾಮದಾಸ್ ಅವರು ಶ್ರೀನಿವಾಸ್ ನಟರಾಜ್ ಅವರಿಗೆ ಗುತ್ತಿಗೆ ನೀಡಿದ್ದರು. ಈ ವೇಳೆ ಶಿಲ್ಪಕ್ಕೆ ಯೋಗ್ಯವಾದ ಶಿಲೆ ಅಲ್ಲಿ ಸಿಕ್ಕಿತ್ತು. ಜಮೀನಿನ 10 ಅಡಿ ಆಳದಲ್ಲಿ 2022ರಲ್ಲಿ ದೊರೆತ ಭಾರಿ ಗಾತ್ರವಿದ್ದ ಶಿಲೆಯನ್ನು ಮೂರು ಭಾಗವಾಗಿ ಮಾಡಿ ಹೊರೆತೆಗೆಯಲಾಗಿತ್ತು. ಈ ವಿಷಯ ತಿಳಿದ ಹಲವು ಶಿಲ್ಪಿಗಳು ಈ ಕೃಷ್ಣಶಿಲೆ ಬೇಕೆಂದು ಕೇಳಿದ್ದರು. ಅಯೋಧ್ಯೆಗೂ ಇದನ್ನೇ ಕಳುಹಿಸಲಾಗಿತ್ತು.
ಆದ್ರೆ ಮೊದಲು ಅಯೋಧ್ಯೆಗೆ ಈ ಕಲ್ಲು ಹೋಗುತ್ತೆ ಅನ್ನೋ ಕಲ್ಪನೆ ಯಾರಿಗೂ ಇರಲಿಲ್ಲ. ಇನ್ನು ಇಲ್ಲಿ ಹೊರ ತೆಗೆಯಲಾಗಿದ್ದು ಕಲ್ಲುಗಳನ್ನು ಕಂಡ ಕೆಲವರು, ಅನಧಿಕೃತ ಗಣಿಗಾರಿಕೆ ನಡೆಯುತ್ತಿದೆ ಎಂದು ದೂರು ಕೊಟ್ಟಿದ್ದರು. ಹೀಗಾಗಿ ಸ್ಥಳ ಪರಿಶೀಲಿಸಿದ್ದ ಅಧಿಕಾರಿಗಳು, ಅನುಮತಿ ಪಡೆಯದೇ ಕಲ್ಲು ತೆಗೆದಿದ್ದಕ್ಕೆ ಗುತ್ತಿಗೆದಾರನಿಗೆ 80 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಈ ದಂಡವನ್ನು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಪಾವತಿ ಮಾಡಿದ್ದರು. ಈ ವಿಚಾರ ತಿಳಿದು ಬಿಜೆಪಿ ಪಕ್ಷದ ವತಿಯಿಂದ ಗುತ್ತಿಗೆದಾರನಿಗೆ ಈ ಹಣ ವಾಪಸ್ ನೀಡಲು ನಿರ್ಧಾರ ಮಾಡಲಾಗಿದೆ.