CrimeDistricts

ಹನಿಟ್ರ್ಯಾಪ್‌ಗೆ ಬಿದ್ದ 79 ವರ್ಷದ ಅಜ್ಜ; ಆ ಕಿಲಾಡಿ ಲೇಡಿ ಮಾಡಿದ್ದೇನು..?

ದಾವಣಗೆರೆ; ಕಿಲಾಡಿ ಲೇಡಿಯೊಬ್ಬರು 79 ವರ್ಷದ ಮುದುಕನನ್ನು ಹನಿಟ್ರ್ಯಾಪ್‌ಗೆ ಬೀಳಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾಳೆ. ಕಷ್ಟ ಅಂತ ಹೇಳಿಕೊಂಡು ಬಂದ ಮಹಿಳೆಗೆ ವೃದ್ಧ ಸಾಲ ನೀಡಿದ್ದ. ಅದನ್ನು ವಾಪಸ್‌ ಕೊಡು ಅಂತ ಹೇಳಿದ್ದಕ್ಕೆ, ಮುದುಕನಿಗೆ ಪ್ರಜ್ಞೆ ತಪ್ಪಿಸಿ ವಿವಸ್ತ್ರಗೊಳಿಸಿ, ಅದನ್ನು ಫೋಟೋ ತೆಗೆದಿಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಲೇಡಿ ಈಗ ಸಿಕ್ಕಿಬಿದ್ದಿದ್ದಾಳೆ.

ದಾವಣಗೆರೆಯ ಸರಸ್ವತಿ ನಗರದ ನಿವಾಸಿ 32 ವರ್ಷದ ಯಶೋಧಾ ಸಿಕ್ಕಿಬಿದ್ದ ಮಹಿಳೆ. ಶಿವಕುಮಾರ ಸ್ವಾಮಿ ಬಡಾವಣೆ ನಿವಾಸಿ 79 ವರ್ಷದ ಚಿದಾನಂದಪ್ಪ ಅವರಿಗೆ 15 ಲಕ್ಷ ರೂಪಾಯಿಗೆ ಮಹಿಳೆ ಬೇಡಿಕೆ ಇಟ್ಟಿದ್ದಳು. ಇಬ್ಬರೂ ವಾಸವವಿರುವ ಬಡವಾಣೆಗಳು ಅಕ್ಕಪಕ್ಕವಿದ್ದು, ಇತ್ತೀಚೆಗೆ ಇಬ್ಬರಿಗೂ ಪರಿಚಯವಾಗಿತ್ತು. ಯಶೋಧಾ ಆಗಾಗ ಚಿದಾನಂದಪ್ಪರನ್ನು ಮನೆಗೆ ಕರೆದು ಟೀ, ಕಾಫಿ ಕೊಡುತ್ತಿದ್ದಳು. ಇದೇ ವೇಳೆ ಆಗಾಗ ಕಷ್ಟ ಎಂದು ಹೇಳಿಕೊಂಡು ಐದತ್ತು ಸಾವಿರ ಅಂತ ಪಡೆದು ಬರೋಬ್ಬರಿ 86 ಸಾವಿರ ರೂಪಾಯಿ ತೆಗೆದುಕೊಂಡಿದ್ದಳು. ವಾಪಸ್‌ ಕೊಡು ಎಂದಾಗ ಏನೋ ಒಂದು ಸಬೂಬು ಹೇಳುತ್ತಿದ್ದಳು. ಒಂದು ದಿನ ಗಟ್ಟಿಯಾಗಿ ಕೇಳಿದಾಗ ಯಶೋಧಾ ಹನಿಟ್ರ್ಯಾಪ್‌ ಪ್ಲ್ಯಾನ್‌ ಮಾಡಿದ್ದಾಳೆ.

ಒಂದು ದಿನ ವಾಕಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಯಶೋಧಾ, ಚಿದಾನಂದಪ್ಪನನ್ನು ಮನೆಗೆ ಕರೆದಿದ್ದಾಳೆ. ಮತ್ತು ಔಷಧಿ ಬೆರೆಸಿದ ಜ್ಯೂಸ್ ಕೊಟ್ಟಿದ್ದಾಳೆ. ಅದನ್ನು ಕುಡಿದ ಕೆಲಹೊತ್ತಲ್ಲೇ ಆ ವೃದ್ಧ ಪ್ರಜ್ಞೆ ತಪ್ಪಿದ್ದು, ಈ ವೇಳೆ ಚಿದಾನಂದಪ್ಪರ ಮೈಮೇಲಿನ ಬಟ್ಟೆ ತೆಗೆದ ಯಶೋಧಾ ಆತನ ಪಕ್ಕದಲ್ಲಿ ಮಲಗಿದಂತೆ ನಟಿಸಿ ಹಲವು ಫೋಟೋಗಳನ್ನು ತೆಗೆದುಕೊಂಡಿದ್ದಾಳೆ.

ಇದಾದ ಎರಡು ದಿನಗಳ ನಂತರ ಯಶೋಧಾ ಬ್ಲ್ಯಾಕ್‌ ಮೇಲ್‌ ಮಾಡೋದಕ್ಕೆ ಶುರು ಮಾಡಿದ್ದಳಂತೆ. 15 ಲಕ್ಷ ರೂಪಾಯಿ ಕೊಡುವಂತೆ ಪೀಡಿಸುತ್ತಿದ್ದಳಂತೆ. ಚಿದಾನಂದಪ್ಪ ಕೂಡಾ ಭಯಬಿದ್ದು 7-8 ಲಕ್ಷ ರೂಪಾಯಿ ಕೊಡೋಕೆ ಸಿದ್ಧವಾಗಿದ್ದರು. ಆದ್ರೆ ಯಶೋಧಾ 15 ಲಕ್ಷ ಬೇಕೇಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಜೊತೆಗೆ ವಾಟ್ಸಾಪ್‌ಗೆ ಒಂದು ಫೋಟೋ ಕೂಡಾ ಕಳುಹಿಸಿದ್ದಾಳೆ. ಕೊನೆಗೆ ದಿಕ್ಕುತೋಚದ ಚಿದಾನಂದಪ್ಪ ತನ್ನ ಮಗನಿಗೆ ವಿಚಾರ ತಿಳಿಸಿದ್ದಾರೆ. ಅವರ ಮಗ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಯಶೋಧಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share Post