ಭಾವಿ ಗಂಡನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಜಾರ್ಖಂಡ್; ಭಾವಿ ಗಂಡನ ಜೊತೆ ವಾಕಿಂಗ್ ಮಾಡುತ್ತಿದ್ದಾಗ ಪುಂಡರ ಗುಂಪೊಂದು ಅವರ ಮೇಲೆ ದಾಳಿ ಮಾಡಿದ್ದು, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಎಂಬಲ್ಲಿ ಈ ಕೃತ್ಯ ಎಸಗಲಾಗಿದ್ದು, ಯುವತಿಯನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ.
ಬರಿಜಾಲ್ ಗ್ರಾಮದ ಬಳಿ ಮದುವೆ ನಿಶ್ಚಯವಾಗಿದ್ದ ಯುವಕ, ಯುವತಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಬಂದ ಐವರು ಪುಂಡರ ಗುಂಪು ದಾಳಿ ಮಾಡಿದೆ. ಅವರ ಬಳಿ ಇದ್ದ ಬ್ಯಾಗ್ ಹಾಗೂ ಮೊಬೈಲ್ ಕಿತ್ತುಕೊಂಡಿದ್ದಾರೆ. ಅನಂತರ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಯುವಕನಿಗೂ ಬೆದರಿಕೆ ಹಾಕಿದ್ದಾರೆ. ಹೇಗೋ ಅಲ್ಲಿಂದ ತಪ್ಪಿಸಿಕೊಂಡ ಯುವಕ, ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾನೆ.
ಅಷ್ಟರಲ್ಲಾಗಲೇ ದುಷ್ಕರ್ಮಿಗಳು ಯುವತಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಪೊದೆಯಲ್ಲಿ ಬಿಸಾಕಿ ಹೋಗಿದ್ದರು. ಕೂಡಲೇ ಪೊಲೀಸರು ಯುವತಿಯನ್ನು ರಕ್ಷಣೆ ಮಾಡಿ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿಟಗುತ್ತು ಗ್ರಾಮದ ಐವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.