CrimeNational

ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಜುಬೇರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಹತ್ರಾಸ್; ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಗಾಗಿ ಆಲ್ಟ್‌ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ. ಉತ್ತರ ಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಜುಬೇರ್ ವಿರುದ್ಧ ಕೋಮು ಭಾವನೆಗೆ ಧಕ್ಕೆ, ಕೋಮು ಪ್ರಚೋದನೆ, ಧರ್ಮಗಳ ನಿಂದನೆ, ಆಕ್ಷೇಪಾರ್ಹ ಸಂಗತಿಗಳ ಪ್ರಸಾರ ಆರೋಪದ ಮೇಲೆ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಹತ್ರಾಸ್ ನ್ಯಾಯಾಲಯ ಇತ್ತೀಚೆಗಷ್ಟೇ ಜುಬೇರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು.

ಎರಡು ಗುಂಪುಗಳ ನಡುವೆ ದ್ವೇಷ ಹರಡಿರುವ ಆರೋಪದ ಮೇಲೆ ಕಳೆದ ವರ್ಷ ಜುಬೇರ್ ಅವರ ವಿರುದ್ಧ ಲಖಿಂಪುರ– ಖೇರಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಕೋರ್ಟ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಹಾಗಾಗಿ, ಜುಬೇರ್ ಇನ್ನೂ ಜೈಲಿನಲ್ಲೇ ಇದ್ದಾರೆ. ಇನ್ನು ನಿನ್ನೆಯಷ್ಟೇ ಉತ್ತರ ಪ್ರದೇಶ ಸರ್ಕಾರ ಜುಬೇರ್ ವಿರುದ್ಧದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಮೂಲಗಳ ಪ್ರಕಾರ, ಇಬ್ಬರು ಸದಸ್ಯರಿರುವ ಎಸ್ಐಟಿಗೆ ಐಜಿಪಿ ಪ್ರೀತಿಂದರ್ ಸಿಂಗ್ ಅವರು ನೇತೃತ್ವ ವಹಿಸುವರು. ಡಿಐಜಿ ಅಮಿತ್ ಕುಮಾರ್ ವರ್ಮಾ ತಂಡದ ಇತರ ಸದಸ್ಯರಾಗಿರುವರು ಎಂದು ತಿಳಿದುಬಂದಿದೆ.

Share Post