CrimeNational

ಗುಜರಾತ್‌ನ ಜನಪ್ರಿಯ ಗಾಯಕಿ ವೈಶಾಲಿ ಅನುಮಾನಾಸ್ಪದ ಸಾವು..!

ಗಾಂಧಿನಗರ; ಗುಜರಾತ್ ನ ಖ್ಯಾತ ಗಾಯಕಿ ಹಾಗೂ ನಟಿಯೂ ಆಗಿದ್ದ ವೈಶಾಲಿ ಬುಲ್ಸಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಗುಜರಾತ್‌ನ ಪರ್ಡಿ ತಾಲ್ಲೂಕಿನ ನಿರ್ಜನ ಪ್ರದೇಶವೊಂದರಲ್ಲಿ ನಿಂತಿದ್ದ ಅವರದ್ದೇ ಕಾರಿನಲ್ಲಿ ವೈಶಾಲಿ ಮೃತದೇಹ ಪತ್ತೆಯಾಗಿದೆ. ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ವೈಶಾಲಿ ಇದೀಗ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಎರಡು ದಿನ ಹಿಂದೆಯಷ್ಟೇ ನನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ವೈಶಾಲಿ ಪತಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಹುಡುಕಾಟ ಆರಂಭಿಸಿದ್ದರು. ವೈಶಾಲಿಯ ಕಾರು ವಲ್ಸಾಡ್ ಜಿಲ್ಲೆಯ ಪರ್ಡಿ ತಾಲ್ಲೂಕಿನ ಪಾರ್ ನದಿ ತೀರದಲ್ಲಿನ ನಿರ್ಜನ ಪ್ರದೇಶದಲ್ಲಿ ಕಂಡಿಬಂದಿದೆ. ಕಾರು ನೋಡಿದ್ದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಕಾರಿನ ಹಿಂಬದಿಯ ಸೀಟಿನಲ್ಲಿ ವೈಶಾಲಿಯ ಮೃತದೇಹ ದೊರೆತಿದೆ.

ಮಾಹಿತಿ ಪ್ರಕಾರ, ಗಾಯಕಿಯನ್ನು ಉಸಿರುಗಟ್ಟಿಸಿ ಕೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸಾಯುವ ಸಂದರ್ಭದಲ್ಲಿ ಯಾವುದೇ ಪ್ರತಿರೋಧ ತೋರಿಸಿದ ಕುರುಹುಗಳೂ ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯ ಹೇಳಿಕೆ ಪ್ರಕಾರ ವಲ್ಸಾಡ್ ನ ತಮ್ಮ ಮನೆಯಿಂದ ಹೊರಡುವಾಗ ಸ್ಥಳಿಯ ಅಯ್ಯಪ್ಪ ದೇವಸ್ಥಾನದ ಬಳಿ ಗೆಳೆಯರನ್ನು ಕಾಣಲು ಹೋಗುತ್ತಿರುವುದಾಗಿ ತಿಳಿಸಿದ್ದರಂತೆ. ಆನಂತರ ಮನೆಗೆ ಬಾರದ ಹಿನ್ನೆಲೆಯಲ್ಲಿ ಪತಿ ದೂರು ದಾಖಲಿಸಿದ್ದರು.

Share Post