Sathish jarakiholi; ಹಿಂದೂ ಪದಕ್ಕೆ ಅಶ್ಲೀಲ ಅರ್ಥವಿದೆ; ಸತೀಶ್ ಜಾರಕಿಹೊಳಿಗೆ ಕಾನೂನು ಸಂಕಷ್ಟ!
ಬೆಂಗಳೂರು; ಸಚಿವ ಸತೀಶ್ ಜಾರಕಿಹೊಳಿಯವರು ಹಿಂದೂ ಧರ್ಮದ ಹೆಸರಿನ ಬಗ್ಗೆ ವಿವಾದಿತ ಹೇಳಿಕೆಯೊಂದರನ್ನು ಕೊಟ್ಟಿದ್ದರು. 2022ರ ನವೆಂಬರ್ 6ರಂದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಹಿಂದೂ ಪದಕ್ಕೆ ಅಶ್ಲೀಲ ಅರ್ಥವಿದೆ ಎಂದು ಹೇಳಿದ್ದರು. ಅವರು ಅಂದು ನೀಡಿದ್ದ ಈ ಹೇಳಿಕೆಯಿಂದಾಗಿ ಈಗ ಸತೀಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಿದೆ. ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ವಿಚಾರಣೆ ನಡೆಸಿ ಅಂತ ಜನಪ್ರತಿನಿಧಿಗಳ ನ್ಯಾಯಾಯಲಯ ಮಹತ್ವದ ಆದೇಶ ನೀಡಿದೆ. ಇದರಿಂದಾಗಿ ಸಚಿವ ಸತೀಶ್ ಜಾರಕಿಹೊಳಿ, ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಹಿಂದೂ ಪದದ ಮೂಲ ಭಾರತದ್ದಲ್ಲ. ಅದು ಪರ್ಷಿಯನ್ ಭಾಷೆಯದ್ದಾಗಿದ್ದು, ಈ ಪದಕ್ಕೆ ಅಶ್ಲೀಲ ಹಾಗೂ ಕೊಳಕು ಅರ್ಥವಿದೆ. ಹಿಂದೂ ಪದಕ್ಕೂ ನಮ್ಮ ಭಾರತಕ್ಕೂ ಸಂಬಂಧವೇ ಇಲ್ಲ ಎಂದು ಖಾಸಗಿ ಕಾರ್ಯಕ್ರಮ ಒಂದರಲ್ಲಿ ಸತೀಶ್ ಜಾರಕಿಹೊಳಿ ಹೇಳಿದ್ದರು.
ಸತೀಶ್ ಜಾರಕಿಹೊಳಿ ಅವರ ವಿರುದ್ಧ ವಕೀಲ ದಿಲೀಪ್ ಕುಮಾರ್ ಎಂಬುವವರು ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲು ಮಾಡಿದ್ದರು. ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್ ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ ಸೂಚನೆ ಕೊಟ್ಟಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೇಸ್ ದಾಖಲು ಮಾಡಿಕೊಂಡು ಸತೀಶ್ ಜಾರಕಿಹೊಳಿ ವಿಚಾರಣೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ, ಕೋರ್ಟ್ ಆದೇಶ ಏನಿದೆಯೋ ಗೊತ್ತಿಲ್ಲ. ಆದೇಶ ಪ್ರತಿ ಬಂದ ಮೇಲೆ ನನ್ನ ಅಭಿಪ್ರಾಯ ಹೇಳುತ್ತೇನೆ. ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದೂ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.