BengaluruCrime

ಪದೇ ಪದೇ ಸದ್ದು ಮಾಡುತ್ತಿದೆ ರೋಹಿಣಿ ಹೆಸರು; ಸಿಂಧೂರಿಗೂ ವಿವಾದಗಳಿಗೂ ಯಾಕೀ ನಂಟು..?

(ವರದಿ; ಮಂಜುನಾಥ್ ಗರಗ)

ಬೆಂಗಳೂರು; ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪದೇಪದೇ ಒಂದಿಲ್ಲೊಂದು ವಿಚಾರವಾಗಿ ಸುದ್ಧಿಯಲ್ಲಿರುತ್ತಾರೆ. ಈಗ ಐಪಿಎಸ್‌ ಅಧಿಕಾರಿ ರೂಪಾ ಅವರ ಟ್ವೀಟ್‌ಗಳ ಕಾರಣದಿಂದ ರೋಹಿಣಿ ಸಿಂಧೂರಿ ದೊಡ್ಡ ಸುದ್ದಿಗೆ ಕಾರಣರಾಗಿದ್ದಾರೆ. ರೂಪಾ ಅವರು ರೋಹಿಣಿಯವರಿಗೆ 19 ಪ್ರಶ್ನೆಗಳನ್ನು ಕೇಳಿದ್ದರು. ಜೊತೆಗೆ ರೋಹಿಣಿ ಅವರ ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದರು. ಇದು ದೊಡ್ಡ ಸದ್ದು ಮಾಡಿದೆ.

ಅಂದಹಾಗೆ, ರೋಹಿಣಿ ಸಿಂಧೂರಿ ಮೂಲತಹ ಆಂಧ್ರದವರು 2009ರ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ. ಪ್ರಸ್ತುತ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಈ ಹಿಂದೆ ಹಾಸನ, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿವಾದಗಳು ರೋಹಿಣಿ ಸಿಂಧೂರಿ ಯವರಿಗೆ ಹೊಸದಲ್ಲ. ಹಲವು ವಿವಾದಗಳಲ್ಲಿ ಇವರು ಹೆಸರು ತಳುಕುಹಾಕಿ ಕೊಂಡಿವೆ. ಹಾಗಾದರೆ ಯಾರು ಈ ರೋಹಿಣಿ ಸಿಂಧೂರಿ, ಅವರು ಮಾಡಿಕೊಂಡಿರುವ ವಿವಾದಗಳೇನು ಎಂದು ನೋಡುವುದಾದರೆ.

ರೇವಣ್ಣ v/s ರೋಹಿಣಿ ಸಿಂಧೂರಿ
ಈ ಹಿಂದೆ ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದರು. ಅಂದಿನ ಸಚಿವ ಎಚ್‌ಡಿ ರೇವಣ್ಣ ಜೊತೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.ರೋಹಿಣಿ ಸಿಂಧೂರಿ ಮೇಲೆ ಯಾವುದೋ ವಿಚಾರವಾಗಿ ರೇವಣ್ಣ ರಾಜ್ಯದ ಚೀಫ್ ಸೆಕ್ರೇಟರಿ, ಫೈನಾನ್ಸ್ ಸೆಕ್ರೇಟ್ರಿ ಎಲ್ಲಾ ನಿಮ್ಮ‌ನ್ನ ಡೈನಾಮಿಕ್ ಡಿಸಿ ಅಂತಾರೆ. ಆದರೆ ನೀವು ನೋಡಿದರೆ ಹಾಗಿಲ್ಲ ಎಂದು ವ್ಯಂಗ್ಯವಾಡಿದ್ದರು. ರೋಹಿಣಿ ಸಿಂಧೂರಿ ಇದಕ್ಕೆ ಕೊಪಗೊಂಡು ಎಲ್ಲರನ್ನ ಸಸ್ಪೆಂಡ್ ಮಾಡುತ್ತಾ ಹೋದರೆ ಯಾರೂ ಇರಲ್ಲ ಅಂತ ಮಾತಿನ ಮೂಲಕ ತಿರುಗೇಟು ನೀಡಿದ್ದರು. ಇದು ದೊಡ್ಡ ವಿವಾದವಾಗಿತ್ತು. ಇದರಿಂದ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲಾಗಿತ್ತು.

ಸಾರಾ ಮಹೇಶ್ v/s ರೋಹಿಣಿ ಸಿಂಧೂರಿ
ಮೈಸೂರಿನ ಕೆಆರ್‌ ನಗರ ಶಾಸಕ ಸಾರಾ ಮಹೇಶ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡಿದ್ದರು. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಐಶಾರಾಮಿ ಜೀವನ ನಡೆಸಿದ್ದಾರೆ ಆರೋಪವಿದೆ. ಸರ್ಕಾರಿ ಹಣ ದುರುಪಯೋಗ ಮಾಡುತಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡದೆ ಬೇಜವಾಬ್ದಾರಿ ವರ್ತನೆ ಮಾಡಿದ್ದು, ಇದರಿಂದ ಸಾವಿರಾರು ಜನರಿಗೆ ಸಮಸ್ಯೆಯಾಗಿದೆ ಎಂದು ಶಾಸಕ ಸಾರಾ ಮಹೇಶ್ ಆರೋಪಿಸಿದ್ರು. ಇದೇವೇಳೆ ಸಾರಾ ಮಹೇಶ್ ಭೂ ಅಕ್ರಮ ಮಾಡಿದ್ದಾರೆ ಎಂಬ ರೋಹಿಣಿ ಸಿಂಧೂರಿ ಆಡಿಯೋ ವೈರಲ್ ಆಗಿತ್ತು. ಆಗ ಸಾರಾ ಮಹೇಶ್ ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಪ್ರತಾಪ್ ಸಿಂಹ v/s ರೋಹಿಣಿ ಸಿಂಧೂರಿ
‌   ಸಂಸದ ಪ್ರತಾಪ್ ಸಿಂಹ ಜೊತೆಯೂ ರೋಹಿಣಿ ಸಿಂಧೂರಿ ಸಂಘರ್ಷ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸಗಳಾಗಿವೆ ಇದರಿಂದ ಅನೇಕರಿಗೆ ಅನ್ಯಾಯವಾಗಿದೆ ಎಂದು ಸಂಸದ ಪ್ರತಾಪ ಸಿಂಹ ನೇರಾವಾಗಿ ಆಗ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮೆಲೇ ಆರೋಪ ಮಾಡಿದ್ದರು.

ಶಿಲ್ಪಾ ನಾಗ್ v/s ರೋಹಿಣಿ ಸಿಂಧೂರಿ
ಮೈಸೂರು ಮಹಾನಗರ ಪಾಲಿಕೆಯ ಅಂದಿನ ಆಯುಕ್ತೆ ಶಿಲ್ಪಾ ನಾಗ್ ಹಾಗೂ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವೆ ಸಂಘರ್ಷ ಜೋರಾಗಿ ನಡೆಯುತ್ತಿತ್ತು. ಶಿಲ್ಪಾ ನಾಗ್ ರೋಹಿಣಿ ಸಿಂಧೂರಿ ಎಲ್ಲದರಲ್ಲೂ ಮೂಗು ತೂರಿಸುತ್ತಿದ್ದಾರೆ ಅಂತ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾಗಿದ್ದರು. ಕೊನೆಗೆ ಸರ್ಕಾರ ಮದ್ಯಪ್ರವೇಶಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ ಅವರನ್ನು ವರ್ಗಾವಣೆ ಮಾಡಿ ವಿವಾದಕ್ಕೆ ತೆರೆ ಎಳೆದಿತ್ತು.

ಕೊರೊನಾ ಕಾಂಟ್ರವರ್ಸಿ
ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ 24 ಮಂದಿ ಕೊರೋನಾ ಸೋಂಕಿತರು ಮೃತಪಟ್ಟ ದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಕಾರಣ ಎಂಬ ಮಾತು ಕೇಳಿ ಬಂದಿತ್ತು. ಆಗಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸಕಾಲಕ್ಕೆ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಕೆ ಮಾಡದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ನೇರವಾಗಿ ಆರೋಪಿಸಿದ್ದರು. ಕೊರೊನಾ ನಿರ್ವಹಣೆಗಾಗಿ ವೆಚ್ಚ ಮಾಡಿದ ಹಣದಲ್ಲಿ ವ್ಯತ್ಯಾಸವಾಗಿದ್ದರಿಂದಲೂ ವಿವಾದಕ್ಕೆ ಗುರಿಯಾಗಿದ್ದು, ಸಂಸದ ಪ್ರತಾಪ್‌ಸಿಂಹ ಅವರು ಜಿಲ್ಲಾಧಿಕಾರಿಗಳು ಹಣದ ಲೆಕ್ಕ ನೀಡಬೇಕು ಎಂದು ಬಹಿರಂಗವಾಗಿ ಒತ್ತಾಯಿಸಿದ್ದರು.

ಪಾರಂಪರಿಕ ಕಟ್ಟಡದ ದುರಸ್ತಿ ಅಪವಾದ
ಮೈಸೂರು ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸ ಪಾರಂಪರಿಕ ಕಟ್ಟಡವಾಗಿದೆ. ಅಲ್ಲಿ ಯಾವುದೇ ಬದಲಾವಣೆ ಹಾಗು ಕಾಮಗಾರಿ ಮಾಡುವಹಾಗಿಲ್ಲ. ಆದರೆ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಈಜುಕೊಳ, ಜಿಮ್ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಪರಿಸರ ಸ್ನೇಹಿ ಬ್ಯಾಗ್ ಖರೀದಿಯಲ್ಲಿ 14 ಕೋಟಿ ಅವ್ಯವಹಾರ?
ಕೈ ಮಗ್ಗ ನಿಗಮ ಬಿಟ್ಟು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡಿ ರೋಹಿಣಿ ಸಿಂಧೂರಿ ಕಿಕ್ ಬ್ಯಾಕ್ ಪಡೆದಿದ್ದಾರೆ ಅಂತ ಸಾ.ರಾ. ಮಹೇಶ್‌ ಆರೋಪಿಸಿದ್ದರು. ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ನೆಪದಲ್ಲಿ ಒಟ್ಟು 14 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿದ್ದರು. ಇನ್ನು ಇತ್ತೀಚಿಗಷ್ಟೇ ರೋಹಿಣಿ ಸಿಂಧೂರಿ ಶಾಸಕ ಸಾರಾ ಮಹೇಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪುಷ್ಟಿನೀಡುವಂತೆ ಫೋಟೋಗಳು ವೈರಲ್‌ ಆಗಿದ್ದವು.

ಹೀಗೆ ಒಂದಲ್ಲ ಒಂದು ವಿವಾದಗಳು ಹಾಗು ಆರೋಪಗಳೊಂದಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೆಸರು ಕೇಳಿಬರುತ್ತಲೇ ಇದೆ. ಈಗ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ ರೂಪಾ ಸಂಘಷ೯ ದೊಡ್ಡದಾಗಿಯೇ ನಡೆಯುತ್ತಿದೆ.

 

Share Post