ಸಂಸತ್ ಕಲಾಪಕ್ಕೆ ನುಗ್ಗಿದ ಪ್ರಕರಣ; ಮನೋರಂಜನ್ ಹಣದ ಮೂಲದ ಬಗ್ಗೆ ತನಿಖೆ
ಮೈಸೂರು; ಸಂಸತ್ ಕಲಾಪ ಸ್ಥಳಕ್ಕೆ ನುಗ್ಗಿ ಕಲರ್ ಗ್ಯಾಸ್ ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಮೈಸೂರಿನ ಮನೋರಂಜನ್‌ಗೆ ಬರುತ್ತಿದ್ದ ಹಣದ ಮೂಲದ ಬಗ್ಗೆ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಮನೋರಂಜನ್ ಪೋಷಕರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿ ಈ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ದೆಹಲಿಯ ಸ್ಪೆಷಲ್ ಸೆಲ್ ಪೊಲೀಸರು ಮನೋರಂಜನ್ ನ ತಂದೆ ದೇವರಾಜೇಗೌಡ, ತಾಯಿ ಶೈಲಜಾ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದ್ದಾರೆ. ಮನೋರಂಜನ್ ದೆಹಲಿ ಮುಂತಾದ ಸ್ಥಳಗಳಿಗೆ ಓಡಾಡಲು ಹಣ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸಿದೆ. 1 ಸಾವಿರ ರೂ. 2 ಸಾವಿರ ರೂ. ಖರ್ಚಿಗೆ ನೀಡುತ್ತಿದ್ದೆವು ಎಂದು ಪೋಷಕರು ಹೇಳಿದ್ದಾರೆ ಎನ್ನಲಾಗಿದೆ. ಆತ ನಮ್ಮ ಬಳಿ ಯಾವತ್ತೂ ಹೆಚ್ಚಿನ ಹಣ ಕೇಳಿಲ್ಲ ಎಂದೂ ಮನೋರಂಜನ್ ಪೋಷಕರು ಪೊಲೀಸರಿಗೆ ಹೇಳಿದ್ದಾರೆ.
ನಾವು ಸಣ್ಣ ಮೊತ್ತದ ಹಣವನ್ನು ಅವನ ಖರ್ಚಿಗೆ ಕೊಡುತ್ತಿದ್ದೆವು. ಅದು ನಗದು ರೂಪದಲ್ಲೇ ಇರುತ್ತಿತ್ತು ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಅರ್ಧಕ್ಕೆ ಕೈಬಿಟ್ಟ ಮನೋರಂಜನ್ ಕೆಲಸದ ನೆಪದಲ್ಲಿ ಬೆಂಗಳೂರಿನಿಂದ ಮುಂಬೈ, ಬೆಂಗಳೂರಿನಿಂದ ದೆಹಲಿ ಎಂದು ಓಡಾಡಿಕೊಂಡಿದ್ದ ಎಂದು ತಂದೆ ಈ ಹಿಂದೆ ಪ್ರತಿಕ್ರಿಯಿಸಿದ್ದರು.