ಹುಡುಗಿಯೊಂದಿಗೆ ಮಗ ಓಡಿಹೋಗಿದ್ದಕ್ಕೆ ಅಮ್ಮನಿಗೆ ಶಿಕ್ಷೆ; ಮಹಿಳೆಯನ್ನು ಬೆತ್ತಲುಗೊಳಿಸಿ ಹಲ್ಲೆ
ಬೆಳಗಾವಿ; ಮಗ ಯಾವುದೋ ಹುಡುಗಿಯನ್ನು ಪ್ರೀತಿ ಮಾಡಿ ಓಡಿಹೋದರೆ ಅಮ್ಮ ಏನು ಮಾಡೋದಕ್ಕೆ ಆಗುತ್ತದೆ ಅಲ್ಲವೇ..? ಆದ್ರೆ ಇದನ್ನು ಅರ್ಥ ಮಾಡಿಕೊಳ್ಳದ ದುರುಳರು ಮಗ ಮಾಡಿದ ಕೆಲಸಕ್ಕೆ ಅಮ್ಮನಿಗೆ ಶಿಕ್ಷೆ ಕೊಟ್ಟಿದ್ದಾರೆ. ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿದ್ದಾರೆ. ಅಲ್ಲದೆ ಎಲ್ಲರ ಮುಂದೆ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಇಂತಹದ್ದೊಂದು ಅಮಾನವೀಯ ಘಟನೆ ನಡೆದಿರೋದು ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದಲ್ಲಿ.
ಕಮಲವ್ವ ಗಡ್ಕರಿ(42) ಎಂಬ ಮಹಿಳೆಯೇ ಹಲ್ಲೆಗೊಳಗಾದವರು. ಯುವತಿಯ ಮನೆಯವರು ಈ ದಾಳಿ ಮಾಡಿದ್ದು, ಅವರ ಮನೆಯನ್ನೂ ಧ್ವಂಸಗೊಳಿಸಿದ್ದಾರೆ. ಕಮಲವ್ವ ಅವರ ಪುತ್ರ ದುಂಡಪ್ಪ ಹಾಗೂ ಅದೇ ಗ್ರಾಮದ ಪ್ರಿಯಾಂಕಾ ಪ್ರೀತಿ ಮಾಡುತ್ತಿದ್ದರು. ನಿನ್ನೆ ರಾತ್ರಿ ಅವರು ಮನೆ ಬಿಟ್ಟು ಓಡಿಹೋಗಿದ್ದಾರೆ. ಇಂದು ಪ್ರಿಯಾಂಕಾ ನಿಶ್ಚತಾರ್ಥವಿತ್ತು. ಆದ್ರೆ ಒಂದು ದಿನ ಮೊದಲೇ ಪ್ರಿಯಾಂಕ ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದಾಳೆ. ಇದರಿಂದಾಗಿ ರೊಚ್ಚಿಗೆದ್ದ ಪ್ರಿಯಾಂಕಾ ಪೋಷಕರು, ದುಂಡಪ್ಪ ಅವರ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ.
ಯುವಕನ ಮನೆ ಮೇಲೆ ದಾಳಿ ಮಾಡಿದ್ದಲ್ಲದೆ, ಆತನ ತಾಯಿಯನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ. ಅನಂತರ ಕಂಬಕ್ಕೆ ಕಟ್ಟಿ ಭೀಕರವಾಗಿ ಥಳಿಸಿದ್ದಾರೆ. ಈ ಸಂಬಂಧ ಈಗಾಗಲೇ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೊಂದೆಡೆ ಓಡಿಹೋಗಿರುವ ಜೋಡಿಗಾಗಿಯೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದರಿಂದಾಗಿ ಗ್ರಾಮದಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಬಹುತೇಕ ಊರಿನಲ್ಲಿರುವ ಎಲ್ಲರೂ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.