CinemaCrime

ರಣಬೀರ್‌ ಕಪೂರ್‌ ಸಿನಿಮಾ ಶೂಟಿಂಗ್‌ ವೇಳೆ ಸೆಟ್‌ಗೆ ಬೆಂಕಿ

ಮುಂಬೈ; ಬಾಲಿವುಡ್‌ ಚಿತ್ರವೊಂದರ ಶೂಟಿಂಗ್‌ ವೇಳೆ ಸೆಟ್‌ಗೆ ಬೆಂಕಿ ಬಿದ್ದಿದೆ. ಚಿತ್ರಕೂಟ್‌ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಸೆಟ್‌ಗೆ ಬೆಂಕಿ ತಗುಲಿದ್ದು, ಸಂಪೂರ್ಣ ಸುಟ್ಟುಹೋಗಿದೆ. ರಣಬೀರ್‌ ಕಪೂರ್‌ ನಟನೆಯ ಚಿತ್ರದ ಶೂಟಿಂಗ್‌ ವೇಳೆ ಈ ಅವಘಡ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರಕೂಟ್‌ ಸ್ಟುಡಿಯೋದಲ್ಲಿ ನಡೆಯಬೇಕಿದ್ದ ಎರಡು ಬಿಗ್‌ ಬಜೆಟ್‌ ಚಿತ್ರಗಳ ಚಿತ್ರೀಕರಣ ರದ್ದಾಗಿದೆ. 

ರಣಬೀರ್‌ ಕಪೂರ್‌ ಶಂಷೇರಾ ಚಿತ್ರದ ಸೋಲಿನ ನಂತರ ಮತ್ತೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲವ್‌ ರಂಜನ್‌ ನಿರ್ದೇಶನದ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್‌ ನಟಿಸುತ್ತಿದ್ದಾರೆ. ಈ ಚಿತ್ರದ ಜೊತೆ ರಾಜಶ್ರೀ ಪ್ರೊಡಕ್ಷನ್ಸ್ ನಿರ್ಮಾಣದ ರಾಜವೀದ್ ಡಿಯೋಲ್ ಅಭಿನಯದ ಚೊಚ್ಚಲ ಚಿತ್ರದ ಶೂಟಿಂಗ್ ಕೂಡ ಚಿತ್ರಕೂಟ್ ಸ್ಟುಡಿಯೋಸ್‌ನಲ್ಲಿ ನಡೆಯುತ್ತಿತ್ತು. ಆದರೆ, ಇಂದು ಅಗ್ನಿ ಅವಘಡ ಸಂಭವಿಸಿರುವುದರಿಂದ ಎರಡೂ ಚಿತ್ರಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.

ಚಿತ್ರತಂಡದ ಕೆಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವಘಡ ನಡೆದ ವೇಳೆ ರಣ್‌ಬೀರ್ ಕಪೂರ್ ಮತ್ತು ಶ್ರದ್ಧಾ ಸ್ಥಳದಲ್ಲಿ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

 

Share Post