ಪೊಲೀಸರು ಬಂದಿದ್ದು ನೋಡಿ ಹೆದರಿ ಫಿನಾಯಿಲ್ ಕುಡಿದ ಅಧಿಕಾರಿ
ಭೋಪಾಲ್; ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ತನಿಖೆ ನಡೆಸಲು ಪೊಲೀಸರು ಬಂದಿದ್ದನ್ನು ನೋಡಿ ಸರ್ಕಾರಿ ಅಧಿಕಾರಿಯೊಬ್ಬರು ಫಿನಾಯಿಲ್ ಕುಡಿದಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ. ಮಧ್ಯಪ್ರದೇಶದ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ರಾಜ್ಯ ಸರ್ಕಾರದ ಗುಮಾಸ್ತರೊಬ್ಬರ ಮನೆಯಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ 85 ಲಕ್ಷ ರೂಪಾಯಿಗೂ ಹೆಚ್ಚು ನಗದು ಪತ್ತೆಯಾಗಿದೆ. ಸಿಕ್ಕಿಬೀಳುತ್ತಿದ್ದಂತೆ ಆತಂಕಗೊಂಡ ಗುಮಾಸ್ತ ಫಿನಾಯಿಲ್ ಕುಡಿದಿದ್ದಾನೆ.
ಆ ಅಧಿಕಾರಿ ತಿಂಗಳಿಗೆ ಐವತ್ತ ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ಮೇಲ್ ವಿಭಾಗದ ಗುಮಾಸ್ತ ಹೀರೋ ಕೇಸ್ವಾನಿ ಅವರೇ ಸಿಕ್ಕಿಬಿದ್ದ ಅಧಿಕಾರಿ. ಅವರ ನಿವಾಸದಲ್ಲಿ ನಡೆಸಿದ ಶೋಧದ ವೇಳೆ, ಇಒಡಬ್ಲ್ಯು ತಂಡ ಕೋಟ್ಯಂತರ ರೂ. ಮೌಲ್ಯದ ಹಲವಾರು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಜೊತೆಗೆ ಪತ್ತೆಯಾದ ಹಣದ ರಾಶಿಯನ್ನು ನಿಖರವಾಗಿ ಲೆಕ್ಕ ಹಾಕಲು ಅಧಿಕಾರಿಗಳು ನೋಟು ಎಣಿಕೆಯ ಯಂತ್ರವನ್ನು ತರಿಸಿದ್ದರು. ತನಿಖೆಯ ವೇಳೆ ಕೇಸ್ವಾನಿ ಬಾತ್ರೂಮ್ ಕ್ಲೀನರ್ ಫಿನಾಯಿಲ್ ಕುಡಿದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.