25 ಕೋಟಿ ದೇಣಿಗೆ ಕೊಡ್ತೀನಿ ಅಂತ ಬಂದ; 1.10 ಕೋಟಿ ಎಗರಿಸಿ ಪರಾರಿಯಾದ!
ಮಂಡ್ಯ; ಎಜುಕೇಷನ್ ಟ್ರಸ್ಟ್ ಒಂದಕ್ಕೆ ಶಾಲೆ ನಡೆಸಲು 25 ಕೋಟಿ ರೂಪಾಯಿ ದೇಣಿಗೆ ನೀಡುತ್ತೇನೆಂದು ಬಂದ ವ್ಯಕ್ತಿಯೊಬ್ಬ, ಯಾಮಾರಿಸಿ 1.10 ಕೋಟಿ ರೂಪಾಯಿ ಎಗರಿಸಿ ಪರಾರಿಯಾಗಿರುವ ಘಟನೆ ಮಳವಳ್ಳಿ ತಾಲೂಕಿನ ಶಿಂಷಾಪುರ ಗ್ರಾಮದಲ್ಲಿ ನಡೆದಿದೆ.
ಮೇರಿ ಎಂಬುವವರು ಶ್ಯಾಲೋಮ್ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ನಡೆಸುತ್ತಿದ್ದಾರೆ. ಇವರು ಹೊಸ ಶಾಲೆ ಆರಂಭಿಸಲು ಪ್ರಯತ್ನ ಮಾಡುತ್ತಿದ್ದು, ಡೋನರ್‌ಗಳಿಗಾಗಿ ಹುಡುಕಾಟ ನಡಸಿದ್ದರು. ಈ ವೇಳೆ, ಸೂರ್ಯ ಎಂಬಾತ ಮೇರಿ ಅವರಿಗೆ ಪರಿಚಯವಾಗಿದ್ದಾನೆ. ಈತ ನಿಮ್ಮ ಟ್ರಸ್ಟ್ 25 ಕೋಟಿ ರೂಪಾಯಿ ದೇಣಿಗೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ಅನಂತರ ತೆರಿಗೆ ಕಟ್ಟಲು ನಗದು ರೂಪದಲ್ಲಿ 1.10 ಕೋಟಿ ರೂಪಾಯಿ ಬೇಕು ಎಂದು ಹೇಳಿದ್ದಾನೆ. ಆರೋಪಿ ಮಾತು ನಂಬಿದ ಮೇರಿ, ಹಣವನ್ನು ಹೊಂದಿಸಿ ಕೊಟ್ಟಿದ್ದಾರೆ. ನಂತರ ಆರೋಪಿ ಬಿಳಿ ಕಾಗದಗಳನ್ನು ನೋಟುಗಳ ಸೈಜಿಗೆ ಕತ್ತರಿಸಿಕೊಂಡು ಕಟ್ಟುಗಳನ್ನು ಮಾಡಿ ತಂದು ಮೇರಿಗೆ ಕೊಟ್ಟಿದ್ದಾನೆ. ಅದನ್ನು ಎಣಿಸುವುದಕ್ಕೆ ಆರಂಭಿಸುವುದಕ್ಕೂ ಮೊದಲು ತಾನೇ ತಂದಿದ್ದ ಜ್ಯೂಸ್ ಅನ್ನು ಮೇರಿ ಸೇರಿ ಇತರರಿಗೆ ಕೊಟ್ಟಿದ್ದಾನೆ. ಅದನ್ನು ಕುಡಿದ ಎಲ್ಲರೂ ಪ್ರಜ್ಞೆ ತಪ್ಪಿದ್ದಾರೆ. ಈ ವೇಳೆ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಪ್ರಜ್ಞೆ ಬಂದ ಮೇಲೆ ಮೇರಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಇದೀಗ ಮೇರಿಯವರು ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.