ಗೋದ್ರೋತ್ತರ ಗಲಭೆ ಪ್ರಕರಣ; ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅರೆಸ್ಟ್
ಅಹಮದಾಬಾದ್; 2002ರಲ್ಲಿ ನಡೆದ ಗೋಧ್ರೋತ್ತರ ಗಲಭೆ ಪ್ರಕರಣ ಸಂಬಂಧ ಮುಗ್ಧರನ್ನು ಸಿಲುಕಿಸಲು ಯತ್ನಿಸಿದ್ದಾರೆಂಬ ಆರೋಪದ ಮೇಲೆ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲವಾಡ್ ಮತ್ತು ಗುಜರಾತ್‌ನ ಮಾಜಿ ಡಿಜಿಪಿ ಆರ್.ಬಿ.ಶ್ರೀಕುಮಾರ್ ಬಂಧನಕ್ಕೊಳಗಾದವರು.
ಪಲನ್‌ಪುರ್ ಜೈಲಿನಲ್ಲಿದ್ದ ಸಂಜೀವ್ ಭಟ್ ಅವರನ್ನು ವರ್ಗಾವಣೆ ವಾರಂಟ್ ಮೂಲಕ ವಶಕ್ಕೆ ಪಡೆಯಲಾಗಿದೆ. ಮಂಗಳವಾರ ಸಂಜೆ ನಿಯಮದಂತೆ ಬಂಧಿಸಲಾಗಿದೆ ಎಂದು ಅಹಮದಾಬಾದ್ ಕ್ರೈಂ ಬ್ರಾಂಚ್‌ನ ಡಿಜಿಪಿ ಚೈತನ್ಯ ಮಾಂಡಲಿಕ್ ತಿಳಿಸಿದ್ದಾರೆ. 1996ರಲ್ಲಿ ಗುಜರಾತ್‌ನ ಬನಾಸಕಾಂಠಾ ಜಿಲ್ಲೆಯಲ್ಲಿ ಮಾದಕ ವಸ್ತು ಹೊಂದಿದ ಸುಳ್ಳು ಆರೋಪದ ಮೇಲೆ ವಕೀಲರೊಬ್ಬರನ್ನು ಬಂಧಿಸಿದ ಪ್ರಕರಣ ಸಂಬಂಧಿಸಿ ಸಂಜೀವ್ ಭಟ್ 2018ರಿಂದ ಪಲನ್‌ಪುರ್ ಜೈಲಿನಲ್ಲಿದ್ದಾರೆ.
2002ರ ಗೋಧ್ರೋತ್ತರ ಗಲಭೆ ಪ್ರಕರಣದಲ್ಲಿ ಮುಗ್ಧ ಜನರನ್ನು ಸಿಲುಕಿಸುವ ಯತ್ನದ ಪ್ರಕರಣದಲ್ಲಿ ತೀಸ್ತಾ, ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಗುಜರಾತ್ ಸರ್ಕಾರ ಕಳೆದ ತಿಂಗಳು ಎಸ್‌ಐಟಿಯನ್ನು ನೇಮಿಸಿತ್ತು.