ಸಿಬಿಐ ಅಧಿಕಾರಿಗಳ ಹೆಸರಲ್ಲಿ ಕರೆ; ನಂಬಿ 4 ಕೋಟಿ ರೂಪಾಯಿ ಕಳೆದುಕೊಂಡ ವೈದ್ಯ!
ಬೆಂಗಳೂರು; ಸಿಬಿಐ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ, ಜನರನ್ನು ಮೋಸ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಲೇ ಇವೆ.. ಈಗಾಗಲೇ ಬೆಂಗಳೂರಿನಲ್ಲಿ ಮಹಿಳಾ ವಕೀಲರೊಬ್ಬರು, ಟೆಕ್ಕಿಒಬ್ಬರು ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.. ನಟಿಯೊಬ್ಬರನ್ನು ಕೂಡಾ ಡಿಜಿಟಲ್ ಅರೆಸ್ಟ್ ಮಾಡಿ ಹಿಂಸೆ ನೀಡಲಾಗಿದೆ.. ಹೀಗಿರುವಾಗಲೇ ಬೆಂಗಳೂರಿನ ವೈದ್ಯರು ಕೂಡಾ 3.71 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.. ತಾನು ಮೋಸ ಹೋಗಿರುವುದು ಗೊತ್ತಾದ ಮೇಲೆ ಆ ವೈದ್ಯ ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದ್ದಾರೆ..
ಕರ್ನಾಟಕದ ಹಾವೇರಿಯ ಭೀಮಸೇನ್ ರಾಜೀವಾಸ್ ಕರ್ಜಗಿ (83) ಎಂಬ ಹಿರಿಯ ವೈದ್ಯರಿಗೆ ಮುಂಬೈ ಸಿಬಿಐನಿಂದ ಎಂದು ಹೇಳಿಕೊಂಡು ಕರೆ ಬಂದಿದೆ. ಫೋನ್‌ನಲ್ಲಿನ ಧ್ವನಿಯು ತನ್ನನ್ನು ಸಿಬಿಐ ಅಧಿಕಾರಿ ದೀಕ್ಷಿತ್ ಗಿಡಾಂ ಎಂದು ಪರಿಚಯಿಸಿಕೊಂಡಿದ್ದಾರೆ.. ನರೇಶ್ ಗೋಯಲ್ ಎಂಬ ವ್ಯಕ್ತಿ ನಿಮ್ಮ ಹೆಸರಿನಲ್ಲಿ ನಕಲಿ ದಾಖಲೆಗಳೊಂದಿಗೆ ಬ್ಯಾಂಕ್ ಖಾತೆಗಳನ್ನು ತೆರೆದು ಅಕ್ರಮ ವಹಿವಾಟು ನಡೆಸಿದ್ದಾನೆ. ಇವುಗಳನ್ನು ಹಣ ವರ್ಗಾವಣೆ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಹೇಳಿದ್ದಾನೆ.. ಇದೇ ವೇಳೆ ವೈದ್ಯರ ಆಧಾರ್ ವಿವರಗಳನ್ನು ಕೂಡಾ ಕೇಳಿದ್ದಾರೆ.. ನಂತರ ಅವರ ಖಾತೆಯಲ್ಲಿರುವ ಹಣದ ಬಗ್ಗೆ ವಿಚಾರಿಸಿಕೊಂಡಿದ್ದಾರೆ..
ನಿಮ್ಮ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಸಿಬಿಐ ಖಾತೆಗೆ ಕಳುಹಿಸದಿದ್ದರೆ ಮನೆಗೆ ಬಂದು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ವೈದ್ಯರಿಗೆ ತಿಳಿಸಿದರು. ಇದರಿಂದ ವಿಚಲಿತರಾದ ವೈದ್ಯರು ಯಾವುದೇ ಅಪರಾಧ ಮಾಡದಿದ್ದರೂ 3 ಕೋಟಿ 71 ಲಕ್ಷ ರೂಪಾಯಿಯನ್ನು ನಕಲಿ ಸಿಬಿಐ ಅಧಿಕಾರಿಯ ಖಾತೆಗಳಿಗೆ ಏಪ್ರಿಲ್ 11ರಿಂದ 17ರವರೆಗೆ ವಿವಿಧ ಹಂತಗಳಲ್ಲಿ ರವಾನಿಸಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆ ಹೆಸರಿನಲ್ಲಿ ವಂಚಕರು ವೈದ್ಯರ ಬಳಿ ಸುಮಾರು 4 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ತಾನು ಮೋಸ ಹೋಗಿರುವುದು ತಿಳಿದ ವೈದ್ಯರು ಮೇ 18ರಂದು ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದರು. ಘಟನೆಯ ಕುರಿತು ಸೈಬರ್ ಕ್ರೈಂ ಬ್ರಾಂಚ್ ತನಿಖೆ ಆರಂಭಿಸಿದೆ.