ಅಫ್ಗಾನಿಸ್ತಾನದ ರಷ್ಯಾ ರಾಯಭಾರ ಕಚೇರಿ ಬಳಿ ಸ್ಫೋಟ; ಹತ್ತು ಮಂದಿ ದುರ್ಮರಣ ಶಂಕೆ
ಕಾಬೂಲ್; ಅಫ್ಗಾನಿಸ್ತಾನದಲ್ಲಿ ಸ್ಫೋಟಗಳು ನಡೆಯುತ್ತಲೇ ಇವೆ. ಇವತ್ತೂ ಕೂಡಾ ಒಂದು ಸ್ಫೋಟ ಸಂಭವಿಸಿದ್ದು, ಹತ್ತು ಮಂದಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ರಷ್ಯಾ ರಾಯಭಾರ ಕಚೇರಿಯ ಹೊರಭಾಗದಲ್ಲಿ ಈ ಕೃತ್ಯ ಎಸಗಲಾಗಿದೆ.
ಘಟನೆಯಲ್ಲಿ ರಷ್ಯಾ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಎಂಟರಿಂದ 10 ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ರಾಯಭಾರ ಕಚೇರಿಯ ಹೊರಗಡೆ ವೀಸಾಕ್ಕಾಗಿ ಸರದಿಯಲ್ಲಿ ನಿಂತಿದ್ದವರನ್ನು ಕರೆಯಲು ರಷ್ಯಾದ ರಾಜತಾಂತ್ರಿಕ ಸಿಬ್ಬಂದಿಯೊಬ್ಬರು ಹೊರಬರುತ್ತಿದ್ದಂತೆಯೇ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ನಾಗರಿಕರು ಮೃತಪಟ್ಟಿದ್ದಾರೆ, ಇತರ 10 ಮಂದಿಗೆ ಗಾಯವಾಗಿದೆ ಎಂದು ಕಾಬೂಲ್ ಪೊಲಿಸ್ ಮುಖ್ಯಸ್ಥರ ವಕ್ತಾರ ಖಾಲಿದ್ ಜದ್ರಾನ್ ತಿಳಿಸಿದ್ದಾರೆ.
ಇದೊಂದು ಆತ್ಮಾಹುತಿ ದಾಳಿ ಆಗಿರಬೇಕು ಎಂದು ಶಂಕಿಸಲಾಗಿದೆ. ಸದ್ಯ ಯಾವೊಂದು ಸಂಘಟನೆಯೂ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಈಚಿನ ದಿನಗಳಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಸ್ಥಳೀಯ ಘಟಕ ನಾಗರಿಕರು ಮತ್ತು ತಾಲಿಬಾನಿಗಳನ್ನು ಗುರಿಯಾಗಿಟ್ಟುಕೊಂಡು ಹಿಂಸಾತ್ಮಕ ದಾಳಿ ತೀವ್ರಗೊಳಿಸಿವೆ.