CrimeDistricts

ಹ್ಯಾಕರ್‌ ಶ್ರೀಕಿ ಜೊತೆ ಕಾಂಗ್ರೆಸ್‌ ನಾಯಕರ ನಂಟು; ಆರಗ ಜ್ಞಾನೇಂದ್ರ

ಶಿವಮೊಗ್ಗ: ಬಿಟ್‌ ಕಾಯಿನ್‌ ಹ್ಯಾಕಿಂಗ್‌ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿಗೆ ಕಾಂಗ್ರೆಸ್‌ ನಾಯಕರ ಜೊತೆ ನಂಟಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪ ಮಾಡಿದ್ದಾರೆ. ಸಾಗರ ಪಟ್ಟಣದ ಗಾಂಧಿ ಮೈದಾನದಲ್ಲಿ ವಿಧಾನ ಪರಿಷತ್‌ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಟ್‌ ಕಾಯಿನ್‌ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ಸುಮ್ಮನೆ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.


ಬಿಜೆಪಿ ವಿರುದ್ಧ ಆರೋಪ ಮಾಡಲು ಕಾಂಗ್ರೆಸ್‌ ನಾಯಕರಿಗೆ ಯಾವುದೇ ಪ್ರಮುಖ ವಿಷಯ ಇಲ್ಲ. ಹೀಗಾಗಿ, ಬಿಟ್‌ ಕಾಯಿನ್‌ ವಿಷಯದಲ್ಲಿ ಬಿಜೆಪಿ ಮೇಲೆ ಗೂಬೆ ಕೂರಿಸಲು ಬರುತ್ತಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿಯ ಯಾವುದೇ ಮುಖಂಡರು ಭಾಗಿಯಾಗಿಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯುಬಿ ಸಿಟಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಮಗನ ಜೊತೆ ಶ್ರೀಕಿ ಕಾಣಿಸಿಕೊಂಡಿದ್ದ. ನಂತರ ಗೋವಾದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕರ ಮಗನೊಬ್ಬನ ಜೊತೆ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕಿ ಸಿಕ್ಕಿಬಿದ್ದಿದ್ದ. ಆಗ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿತ್ತು. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಆತನ ಮೇಲೆ ಮೊಕದ್ದಮೆ ದಾಖಲಿಸದೆ ಬಿಟ್ಟು ಕಳುಹಿಸಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.

Share Post