CrimeDistricts

ಚಿತ್ರದುರ್ಗದ ಪಾಳುಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ!

ಚಿತ್ರದುರ್ಗ;  ಚಿತ್ರದುರ್ಗದಲ್ಲಿ ಪಾಳುಬಿದ್ದ ಮನೆಯೊಂದರಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿವೆ. ಚಳ್ಳಕೆರೆ ಗೇಟ್‌ ಸಮೀಪದ ಜೈಲ್‌ ರಸ್ತೆಯಲ್ಲಿನ ಮನೆಯಲ್ಲಿ ಈ ಅಸ್ಥಿಪಂಜರಗಳು ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ಮನೆಯಲ್ಲಿ ಜಗನ್ನಾಥ್‌ ರೆಡ್ಡಿ ಹಾಗೂ ಅವರ ಕುಟುಂಬದವರು ವಾಸವಿದ್ದರು. ಜಗನ್ನಾಥರೆಡ್ಡಿಗೆ 80 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಅವರ ಕುಟುಂಬದ ಸದಸ್ಯರೆಲ್ಲಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಅವರು ವಾಸಿಸುತ್ತಿದ್ದ ಮನೆಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿವೆ. ಹೀಗಾಗಿ, ಮನೆಯಲ್ಲಿ ಪತ್ತೆಯಾಗಿರುವ  ಅಸ್ಥಿಪಂಜರಗಳು ಜಗನ್ನಾಥ್‌ರೆಡ್ಡಿ ಹಾಗೂ ಅವರ ಕುಟುಂಬದವರದ್ದೇ ಇರಬಹುದು ಎಂದು ಅವರ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಗನ್ನಾಥರೆಡ್ಡಿ ಅವರ ಸಂಬಂಧ ಪವನ್‌ ಕುಮಾರ್‌ ಅವರು ಚಿತ್ರದುರ್ಗ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣರೆಡ್ಡಿ, ನರೇಂದ್ರರೆಡ್ಡಿ ವಾಸವಾಗಿದ್ದರು. ಈಗ ಸಿಕ್ಕಿರುವುದು ಕೂಡಾ ಐದು ಅಸ್ಥಿಪಂಜರಗಳು. ಹೀಗಾಗಿ ಇವರೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೂರು ವರ್ಷಗಳ ಹಿಂದೆ ಐವರೂ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಆದ್ರೆ ಈ ಸಾವು ಯಾಕೆ ಆಯಿತು..? ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೊದಲಿಗೆ ಅಸ್ಥಿಪಂಜರಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಸಂಬಂಧಿ ಪವನ್‌ ಕುಮಾರ್‌, ಜಗನ್ನಾಥ್‌ರೆಡ್ಡಿಯವರು ನಿವೃತ್ತ ಎಂಜಿನಿಯರ್‌ ಆಗಿದ್ದರು. ಅವರ ಕುಟುಂಬದ ಜೊತೆ ನಮ್ಮ ಕುಟುಂಬದ ಸಂಪರ್ಕ ಹಲವಾರು ವರ್ಷಗಳಿಂದ ಇರಲಿಲ್ಲ. ಅವರು ನಮ್ಮ ಮನೆಗೆ ಬರುತ್ತಿರಲಿಲ್ಲ. ನಾವು ಅವರ ಮನೆಗೆ ಹೋಗುತ್ತಿರಲಿಲ್ಲ. ಹಲವು ವರ್ಷಗಳಿಂದ ಜಗನ್ನಾಥರೆಡ್ಡಿ ಕುಟುಂಬದವರು ಎಲ್ಲೂ ನಮಗೆ ಕಂಡಿರಲಿಲ್ಲ ಎಂದು ಹೇಳಿದ್ದಾರೆ.

ಮನೆ ಪಾಳು ಬಿದ್ದಿದ್ದರಿಂದ ಆ ಮನೆ ಕಡೆ ಯಾರೂ ತಲೆ ಹಾಕಿರಲಿಲ್ಲ. ಆದ್ರೆ ಇತ್ತೀಚೆಗೆ ಕಳ್ಳರು ಆ ಮನೆಗೆ ನುಗ್ಗಿರುವ ಸಾಧ್ಯತೆ ಇದೆ. ಹೀಗಾಗಿ ಅದರ ಬಾಗಿಲು ಒಡೆಯಲಾಗಿದೆ. ಬಾಗಿಲು ಓಪನ್‌ ಇದ್ದಿದ್ದರಿಂದ ನಾಯಿಗಳು ಒಳಗೆ ನುಗ್ಗಿದ್ದು, ತಲೆ ಬುರಡೆಗಳನ್ನು ಅವು ಕಚ್ಚಿಕೊಂಡು ಬಂದು ಮನೆ ಹೊರಗೆ ಹಾಕಿವೆ. ಇದನ್ನು ಕಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹತ್ತು ವರ್ಷದ ಹಿಂದೆ ಈ ಮನೆಯಲ್ಲಿ ಜನ ಇರುವುದನ್ನು ನೋಡಿದ್ದೆ. ಈ ಮನೆಯಲ್ಲಿ ವಯಸ್ಸಾದವರು, ನಡೆಯಲಾರದವರು ಇದ್ದಿದ್ದನ್ನು ನೋಡಿದ್ದೆ. ಆಗಾಗ ಹಾಲು ತರಲು ಹೊರಬರುತ್ತಿದ್ದದ್ದು ಬಿಟ್ಟರೆ ಅವರು ಎಲ್ಲೂ ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಹತ್ತು ವರ್ಷದ ಹಿಂದೆ ಈ ಮನೆ ಮುಂದೆ ಚರಂಡಿ ರಿಪೇರಿ ಮಾಡಿದ್ದೆವು. ಈ ವೇಳೆ ಸಂದರ್ಭದಲ್ಲಿಯೂ ಈ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಹತ್ತು ವರ್ಷದ ಹಿಂದೆಯೇ ಇವರು ಸಾವನ್ನಪ್ಪಿರಬಹುದು ಎಂದು ವಾಲ್‌ಮನ್‌ ಆಗಿ ಕೆಲಸ ಮಾಡುವ ಪರಶುರಾಮ್‌ ಎಂಬುವವರು ಹೇಳಿಕೊಂಡಿದ್ದಾರೆ.

ಇನ್ನು ಮಾಹಿತಿ ಪ್ರಕಾರ ಮನೆಯಲ್ಲಿ 2019ರ ಕ್ಯಾಲೆಂಡರ್‌ ಈ ಮನೆಯಲ್ಲಿದೆ. ಹೀಗಾಗಿ ಕೊರೊನಾ ಸಮಯದಲ್ಲಿ ಮನೆಯಲ್ಲಿದ್ದವರೆಲ್ಲಾ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

 

Share Post