‘ಮೇಡ್ ಇನ್ ಚೈನಾ’ : ಕನ್ನಡದ ಮೊದಲ ವರ್ಚುವಲ್ ಸಿನಿಮಾ
ಬೆಂಗಳೂರು : 2020 ಮತ್ತು 2021 ಜನರನ್ನು ಬಿಟ್ಟು ಬಿಡದೆ ಕಾಡಿದ ತೊಂದರೆ ಅಂದರೆ ಅದು ಕೊರೊನಾ. ಈ ಸಂದರ್ಭದಲ್ಲಿ ಎಲ್ಲರ ಕೈ ಹಿಡಿದಿದ್ದು ಎಂದರೆ ಅದು ಇಂಟರ್ನೆಟ್ ಎಂದೇ ಹೇಳಬೇಕು. ಆನ್‌ಲೈನ್ ಮೊರೆ ಹೋದ ಜನರು ಸಾಕಷ್ಟು ಸಭೆ ಸಮಾರಂಭ, ಆಫೀಸ್ ಮೀಟಿಂಗ್ಸ್ ಎಲ್ಲವನ್ನು ವರ್ಚುವಲ್ ಆಗಿ ಮಾಡಲಾರಂಭಿಸಿದರು. ವರ್ಕ್ ಫ್ರಮ್ ಹೋಮ್ ಅನ್ನೋ ಕಾನ್ಸೆಪ್ಟ್ ಎಲ್ಲೆಡೆ ವ್ಯಾಪಿಸಿತು. ಈ ವರ್ಚುವಲ್ ಮೀಟಿಂಗ್ ಅನ್ನೇ ಕಥಾ ಹಂದರವಾಗಿಸಿಕೊಂಡು ಸಿನಿಮಾ ಒಂದು ತಯಾರಾಗಿದೆ. ಅದೇ ಮೇಡ್ ಇನ್ ಚೈನಾ .
ಇಕ್ಕಟ್ ನಂತರ ವಿಶೇಷ ಸಿನಿಮಾ ಮೂಲಕ ನಾಗಭೂಷಣ್ ಮತ್ತೆ ಕಚಗುಳಿ ಇಡಲು ಸಜ್ಜಾಗಿದ್ದಾರೆ. ವಿದೇಶದಲ್ಲಿ ಸಿಲುಕಿರುವ ಗಂಡ, ಭಾರತದಲ್ಲಿರುವ ಹೆಂಡತಿ, ಅತ್ತೆ, ಮಾವ, ಸ್ನೇಹಿತರು. ಇವರ ನಡುವೆ ನಡೆಯುವ ಪ್ರೀತಿ ಪ್ರೇಮ ಜಗಳವನ್ನೇ ಸಿನಿಮಾವನ್ನಾಗಿಸಿದ್ದಾರೆ. ಇಡೀ ಸಿನಿಮಾವನ್ನು ಕಂಪ್ಯೂಟರ್ ಮತ್ತು ಮೊಬೈಲ್‌ನಲ್ಲೇ ಸೆರೆಹಿಡಿಯಲಾಗಿದೆ. ಇದನ್ನು ಕನ್ನಡದ ಮೊದಲ ವರ್ಚುವಲ್ ಸಿನಿಮಾ ಎಂದು ಹೇಳಬಹುದಾಗಿದೆ.
ನಾಗಭೂಷಣ್ ಜೊತೆಗೆ ಪ್ರಿಯಾಂಕ ತಿಮ್ಮೇಶ್ ಕೂಡ ಕಾಣಿಸಿಕೊಂಡಿದ್ದಾರೆ. ಪ್ರೀತಂ ತೆಗ್ಗಿನಮನೆ ಈ ಸಿನಿಮಾದ ನಿರ್ದೇಶನ ಜೊತೆ ಜೊತೆಗೆ ಸಂಕಲನ, ಗ್ರಾಫಿಕ್ಸ್, ಸಿನಿಮಾಟೋಗ್ರಫಿಯನ್ನು ಕೂಡ ನಿಭಾಯಿಸಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ.