Cinema

ಲತಾ ಮಂಗೇಶ್ಕರ್‌; ನಿಮಗೆ ಗೊತ್ತಿಲ್ಲದ ಹಲವು ಸತ್ಯಗಳು

ಗಾನಕೋಗಿಲೆ ಎಂದೇ ಖ್ಯಾತಿ ಪಡೆದಿದ್ದ ಲತಾ ಮಂಗೇಶ್ಕರ್‌ ಅವರು ಇಂದು ಬೆಳಗ್ಗೆ 8.12ರ ಸುಮಾರಿಗೆ ಮುಂಬೈನಲ್ಲಿ ಇಹಲೋಕ ತ್ಯಜಿಸಿದರು. ಅವರ ವಯಸ್ಸು 92 ವರ್ಷ. ಕೊವಿಡ್‌ ಸೋಂಕಿಗೆ ತುತ್ತಾಗಿದ್ದ ಲತಾ ಮಂಗೇಶ್ಕರ್‌ ಸುಮಾರು 28 ದಿನಗಳಿಂದ ಸಾಔಉ ಬದುಕಿನ ನಡುವೆ ಹೋರಾಟ ನಡೆಸಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

  ಲತಾ ಮಂಗೇಶ್ಕರ್..‌ ಇವರ ಹಾಡು ಕೇಳದ ಭಾರತೀಯನೇ ಇಲ್ಲ ಅಂದರೆ ತಪ್ಪಾಗಲಾರದು.. ಲತಾ ಮಂಗೇಶ್ಕರ್‌ ಅವರು ಭಾರತ ದೇಶದ ಸಾಂಸ್ಕೃತಿಕ ಸಂಪತ್ತು. ಭಾರತೀಯ ಸಂಸ್ಕೃತಿಗೆ ಒಂದು ಪ್ರತೀಕ. ಸಿನಿಮಾ ಸಂಗೀತಕ್ಕೆ ಗಾಯಕಿ ಲತಾ ಮಂಗೇಶ್ಕರ್‌ ಮಹಾರಾಣಿ. ಎಂಟು ದಶಕಗಳ ಕಾಲ ಹಲವು ತಲೆಮಾರುಗಳನ್ನು ತಮ್ಮ ಗಾನ ಮಾಧುರ್ಯದಿಂದ ರಂಜಿಸಿದವರು.

 ಲತಾ ಮಂಗೇಶ್ಕರ್‌ ಗಾಯಕೋಗಿಲೆಯಾಗಿ ಎಲ್ಲರಿಗೂ ಗೊತ್ತು. ಆದ್ರೆ ಅವರ ಜೀವನಶೈಲಿ. ಅವರ ಬದುಕಿನ ದಿನಗಳ ಬಗ್ಗೆ ಸಾಕಷ್ಟು ಜನಕ್ಕೆ ಗೊತ್ತಿಲ್ಲ. ಲತಾ ಮಂಗೇಶ್ಕರ್‌ ಕುರಿತ ಕೆಲವು ಇಂಟರೆಸ್ಟಿಂಗ್‌ ವಿಚಾರಗಳನ್ನು ಇಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

೧. ಲತಾ ಮಂಗೇಶ್ಕರ್‌ ಅವರು ಗಾಯಕಿ ಅಷ್ಟೇ ಅಲ್ಲ, ಕೆಲ ಚಿತ್ರಗಳಲ್ಲಿ ನಟಿಸಿದ್ದರು ಕೂಡಾ.
೨. ನೈಟಿಂಗೇಲ್‌ ಆಫ್‌ ಬಾಲಿವುಡ್‌ ಎಂದೇ ಖ್ಯಾತಿಯಾಗಿದ್ದ ಲತಾ ಅವರು 36 ಭಾಷೆಗಳಲ್ಲಿ ಸುಮಾರು 30 ಸಾವಿರ ಹಾಡುಗಳನ್ನು ಹಾಡಿದ್ದಾರೆ.

೩. ಗಾಯಕಿಯಾಗಿ ಪ್ರಸಿದ್ಧಿ ಪಡೆದ ಲತಾ ಅವರಿಗೆ ಕ್ರಿಕೆಟ್‌ ಅಂದರೆ ಪಂಚಪ್ರಾಣ. ಕಾರುಗಳ ಬಗ್ಗೆಯೂ ವ್ಯಾಮೋಹ ಹೆಚ್ಚು.

ಲತಾ ಮಂಗೇಶ್ಕರ್‌ ಎಂದೂ ಶಾಲೆಗೆ ಹೋದವರಲ್ಲ..!

1929 ಸೆಪ್ಟೆಂಬರ್‌ 28ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಲತಾ ಮಂಗೇಶ್ಕರ್‌ ಜನಿಸಿದರು. ತಂದೆ ದೀನಾನಾಥ್‌ ಮಂಗೇಶ್ಕರ್‌ ಹಿಂದೂಸ್ತಾನಿ ಸಂಗೀತದಲ್ಲಿ ಖ್ಯಾತಿ ಹೊಂದಿದ್ದರು. ಮರಾಠಿ ರಂಗಭೂಮಿ ನಟ ಕೂಡಾ ಗಿದ್ದರು. ಐದು ಮಕ್ಕಳಲ್ಲಿ ಲತಾ ಮಂಗೇಶ್ಕರ್‌ ದೊಡ್ಡವರು. ಲತಾ ಮಂಗೇಶ್ಕರ್‌ ಎಂದೂ ಶಾಲೆಗೆ ಹೋಗಲೇ ಇಲ್ಲ. ತಮ್ಮ ಮನೆಯಲ್ಲಿದ್ದ ಮನೆ ಕೆಲಸದವ ಲತಾ ಅವರಿಗೆ ಮರಾಠಿ ಅಕ್ಷರಾಭ್ಯಾಸ ಮಾಡಿಸಿದರು. ಸ್ಥಳೀಯ ಪೂಜಾರಿಯೊಬ್ಬರು ಲತಾ ಮಂಗೇಶ್ಕರ್‌ ಅವರಿಗೆ ಸಂಸ್ಕೃತವನ್ನು ಕಲಿಸುತ್ತಾರೆ. ಬಂಧುಗಳು, ಟ್ಯೂಷನ್‌ ಹೇಳಿಕೊಡುವ ಗುರುಗಳು ಪಠ್ಯದಲ್ಲಿನ ವಿಷಯಗಳನ್ನು ಬೋಧನೆ ಮಾಡುತ್ತಾರೆ.

ಲತಾ ಅವರಿಗೆ ಸಂಗೀತದ ಮೊದಲ ಗುರು ತಂದೆ

ಲತಾ ಮಂಗೇಶ್ಕರ್‌ ಅವರಿಗೆ ಸಂಗೀತದ ಮೊದಲ ಗುರು ಅವರ ತಂದೆಯೇ. ದೀನಾನಾಥ್‌ ಅವರ ಶಿಷ್ಯರಿಗೆ ಸಂಗೀತ ಕಲಿಸುತ್ತಿದ್ದಾಗ ಲತಾ ಮಂಗೇಶ್ಕರ್‌ ಅವರನ್ನು ಗಮನಿಸುತ್ತಾ ಕುಳಿತಿರುತಿದ್ದರಂತೆ ಲತಾ ಮಂಗೇಶ್ಕರ್‌. ಒಮ್ಮೆ ಶಿಷ್ಯರು ಪ್ರಾಕ್ಟೀಸ್‌ ಮಾಡುವಾಗ ರಾಗವನ್ನು ತಪ್ಪಾಗಿ ಹಾಡುತ್ತಿದ್ದುದನ್ನು ನೋಡಿ, ಲತಾ ಮಂಗೇಶ್ಕರ್‌ ಸರಿಪಡಿಸುವ ಪ್ರಯತ್ನ ಮಾಡಿದ್ದರಂತೆ. ಅದನ್ನು ಗಮಿಸಿದ ಅವರ ತಂದೆ ದೀನಾನಾಥ್‌, ಲತಾ ಅವರಲ್ಲಿದ್ದ ಸಂಗೀತ ಪ್ರತಿಭೆಯನ್ನು ಗುರುತಿಸಿದ್ದರು.  ಒಂಬತ್ತನೇ ವಯಸ್ಸಿನಲ್ಲೇ ತಂದೆಯೊಂದಿಗೆ ಸೇರಿ ಲತಾ ಮಂಗೇಶ್ಕರ್‌ ಕಾರ್ಯಕ್ರಮವೊಂದರಲ್ಲಿ ಸಂಗೀತ ಪ್ರದರ್ಶನ ನೀಡಿದ್ದರು.

  ಆದರೆ ಈ ನಡುವೆ ದೀನಾನಾಥ್‌ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ ಅವರ ನಾಟಕ ಕಂಪನಿಯನ್ನು ಮುಚ್ಚಿಬಿಡುತ್ತಾರೆ. ಜೊತೆಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅವರ ಮನೆ ಕೂಡಾ ಹರಾಜು ಹಾಕಲ್ಪಡುತ್ತದೆ. ಇದರಿಂದಾಗಿ ಲತಾ ಅವರ ಕುಟುಂಬ ಅಂದಿನ ಪೂನಾ ಇಂದಿನ ಪುಣೆ ಬಂದು ನೆಲೆಸುತ್ತದೆ.

ಇಷ್ಟವಿಲ್ಲದಿದ್ದರೂ ನಟಿಸಿದ ಲತಾ ಮಂಗೇಶ್ಕರ್‌

ಲತಾ ಮಂಗೇಶ್ಕರ್‌ ಅವರ ತಂದೆ ದೀನಾನಾಥ್‌ ಮಂಗೇಶ್ಕರ್‌ ಅವರು 1942ರಲ್ಲಿ ಸಾವನ್ನಪ್ಪುತ್ತಾರೆ. ಆಗ ಲತಾ ಮಂಗೇಶ್ಕರ್‌ ಅವರ ವಯಸ್ಸು 13 ವರ್ಷ. ದೊಡ್ಡ ಕುಟುಂಬ ಅವರದ್ದು. ಅತ್ಯಂತ ಕಷ್ಟದ ಪರಿಸ್ಥಿತಿ. ಲತಾ ಮಂಗೇಶ್ಕರ್‌ ಅವರಿಗೆ ಇಬ್ಬರು ತಂಗಿಯರು, ಇಬ್ಬ ಸಹೋದರ. ಮನೆಗೆ ದೊಡ್ಡ ಮಗಳಾಗಿ ತಾಯಿಗೆ ನೆರವಾಗುತ್ತಾ ಕುಟುಂಬ ಭಾರವನ್ನು ಹೊತ್ತುಕೊಳ್ಳುವ ಪರಿಸ್ಥಿತಿ ಲತಾ ಅವರದ್ದು.

ತಂದೆಯ ಮರಣಾನಂತರ ಪುಣೆಯಿಂದ ಲತಾ ಅವರ ಕುಟುಂಬ ಆಗಿನ ಬೊಂಬಾಯಿ (ಈಗಿನ ಮುಂಬೈ)ಗೆ ವಲಸೆ ಬರುತ್ತದೆ. ಅಲ್ಲಿ ಲತಾ ಮಂಗೇಶ್ಕರ್‌ ಸಂಗೀತ ಕಲಿಯುತ್ತಲೇ ಸಿನಿಮಾಗಳಲ್ಲಿ ಹಾಡುವುದಕ್ಕೆ ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದರು. ಆದರೆ 1940 ದಶಕದ ಶುರುವಿನಲ್ಲಿ ಸಿನಿಮಾಗಳಲ್ಲಿ ಹಾಡುಗಳು ಹೆಚ್ಚಾಗಿ ಇರುತ್ತಿರಲಿಲ್ಲ. ಹೀಗಾಗಿ ಅವರಿಗೆ ಹಾಡಲು ಅವಕಾಶ ಸಿಗಲಿಲ್ಲ. ಬದಲಾಗಿ ನಟನೆಗೆ ಅವಕಾಶ ಸಿಕ್ಕಿತು. ಹೀಗಾಗಿ ಸಣ್ಣ ಸಣ್ಣ ಪಾತ್ರಗಳನ್ನು ಮಾಡಲು ಲತಾ ಮಂಗೇಶ್ಕರ್‌ ಶುರು ಮಾಡುತ್ತಾರೆ.

    ಆದರೆ ಸಿನಿಮಾದಲ್ಲಿ ನಟನೆ ಮಾಡುವುದು ಲತಾ ಮಂಗೇಶ್ಕರ್‌ ಅವರಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಅವರ ಮನಸೆಲ್ಲಾ ಹಾಡುವುದರ ಮೇಲೇ ಇತ್ತು. ಆದರೂ ಕುಟುಂಬ ನಿರ್ವಹಣೆಗೆ ಹಣ ಬೇಕಿದ್ದರಿಂದ ಅವರು ಕೆಲವು ಚಿತ್ರಗಳಲ್ಲಿ ನಟಿಸಿದರು. ಮರಾಠಿ ಹಾಗೂ ಹಿಂದಿಯ ಎಂಟು ಸಿನಿಮಾಗಳಲ್ಲಿ ಲತಾ ಮಂಗೇಶ್ಕರ್‌ ಬಾಲನಟಿಯಗಾಗಿ ನಟಿಸಿದ್ದರು.

ಕಿಕೆಟ್‌, ಕಾರುಗಳು, ನಾಯಿಗಳು

ಲತಾ ಮಂಗೇಶ್ಕರ್‌ ಅವರಿಗೆ ಸಿನಿಮಾ ನೋಡುವುದು, ಸಂಗೀತ ಕೇಳುವುದು ಕೂಡಾ ಇಷ್ಟ. ದ ಕಿಂಗ್‌ ಅಂಡ್‌ ಐ ಲತಾ ಮಂಗೇಶ್ಕರ್‌ ಅವರ ಅತ್ಯಂತ ಇಷ್ಟದ ಸಿನಿಮಾ. ಈ ಸಿನಿಮಾವನ್ನು ಅವರು ಕನಿಷ್ಟ ಹದಿನೈದು ಬಾರಿಯಾದರೂ ನೋಡಿರುತ್ತಾರಂತೆ. ಹಾಗೆಯೇ ಸಿಂಗಿಂಗ್‌ ಇನ್‌ ದ ರೈನ್‌ ಕೂಡಾ ಅವರಿಗೆ ತುಂಬಾ ಇಷ್ಟವಾಗಿದ್ದ ಸನಿಮಾ, ಜೇಮ್ಸ್‌ ಬಾಂಡ್‌ ಸಿನಿಮಾಗಳು, ಷೆರ್ಲಾಕ್‌ ಹೋಮ್ಸ್‌ ಡಿಟೆಕ್ಟಿವ್‌ ನಾವೆಲ್‌ಗಳನ್ನು ಕೂಡಾ ಲತಾ ಮಂಗೇಶ್ಕರ್‌ ಇಷ್ಟಪಡುತ್ತಿದ್ದರು.

ಕಾರುಗಳಂದ್ರೆ ಲತಾ ಮಂಗೇಶ್ಕರ್‌ ಅವರಿಗೆ ತುಂಬಾನೇ ಶೋಕಿ. ಒಂದು ಗ್ರೇ ಹಿಲ್ಮನ್‌, ಒಂದು ಬ್ಲ್ಯೂ ಷೆವರ್ಲೆ ಹಿಜ್ಲರ್‌, ಒಂದು ಮರ್ಸೆಡಿಸ್‌ ಅವರ ಬಳಿ ಇದ್ದವು. ಲತಾ ಅವರ ಮನೆಯಲ್ಲಿ ಒಂಬತ್ತು ನಾಯಿಗಳು ಕೂಡಾ ಇದ್ದವು.

ಇನ್ನು ಲತಾ ಮಂಗೇಶ್ಕರ್‌ ಅವರು ಕ್ರಿಕೆಟ್‌ ಅಭಿಮಾನಿ ಕೂಡಾ ಹೌದು. ಆಗಾಗ ಹಾಡುಗಳ ರೆಕಾರ್ಡಿಂಗ್‌ನಿಂದ ವಿರಾಮ ತೆಗೆದುಕೊಳ್ಳುತ್ತಾ ಕ್ರಿಕೆಟ್‌ ಮ್ಯಾಚ್‌ಗಳನ್ನು ನೋಡುತ್ತಿದ್ದರು. ಡಾನ್‌ ಬ್ರಾಡ್ಮನ್‌ ಸಹಿ ಪಡೆದಿದ್ದ ಫೋಟೋವನ್ನು ಅವರ ಮನೆಯಲ್ಲಿಟ್ಟುಕೊಂಡಿದ್ದಾರೆ.

ಅಡುಗೆ ಮಾಡುವುದು, ಫೋಟೋಗಳನ್ನು ತೆಗೆಯುವುದು ಕೆಲಕಾಲ ಅವರ ಹವ್ಯಾಸವಾಗಿತ್ತು. ರಜೆಗಳಿಗೆ ಅಂತ ಅಮೆರಿಕಕ್ಕೆ ಹೋದಾಗ, ಲಾಸ್‌ ವೇಗಾಸ್‌ ಕೆಸಿನೋಗಳಲ್ಲಿ ಕಾಲಕ್ಷೇಪಕ್ಕಾಗಿ ರಾತ್ರಿಯೆಲ್ಲಾ ಜೂಜಾಡುವುದಕ್ಕೆ ಅವರು ಇಷ್ಟಪಡುತ್ತಿದ್ದಂತೆ.

  ಇದು ವಿಚಿತ್ರ ಎನಿಸಬಹುದು. ಆದರೂ ನಾನು ಅಮೆರಿಕಕ್ಕೆ ಹೋದಾಗ ಲಾಸ್‌ ವೇಗಾಸ್‌ನಲ್ಲಿ ಕಾಲ ಕಳೆಯುವುದು ನನಗೆ ತುಂಬಾ ಇಷ್ಟ. ಸ್ಲಾಟ್‌ ಮೆಷಿನ್‌ಗಳ ಬಳಿ ಆಡುತ್ತಿದ್ದೆ. ನನಗೆ ಅದೃಷ್ಟ ಚೆನ್ನಾಗಿದೆ. ತುಂಬಾ ಸಲ ನಾನು ಗೆದ್ದಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಲತಾ ಮಂಗೇಶ್ಕರ್‌ ಹೇಳಿದ್ದರು.

  ಸಂತೋಷವನ್ನು ಇಡೀ ಪ್ರಪಂಚಕ್ಕೆ ಹಂಚಬೇಕು. ಆದರೆ ನೋವನ್ನು ನಮ್ಮಲ್ಲೇ ಉಳಿಸಿಕೊಳ್ಳಬೇಕು ಎಂದು ಅವರು ಯಾವಾಗಲೂ ಹೇಳುತ್ತಿದ್ದರು.

Share Post