ನೆಟ್ಫ್ಲಿಕ್ಸ್ನಲ್ಲಿ ಕಪಿಲ್ ಶರ್ಮ ಬದುಕಿನ ಕಥೆ
ಮುಂಬೈ : ಹಾಸ್ಯ ಕಲಾವಿದ ಕಪಿಲ್ ಶರ್ಮ ಇನ್ನು ಮುಂದೆ ನಿಮಗೆ ನೆಟ್ಫ್ಲಿಕ್ಸ್ನಲ್ಲಿಯೂ ಸಿಗ್ತಾರೆ. ತಮ್ಮ ಹಾಸ್ಯ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸು ಗೆದ್ದ ಕಪಿಲ್ ಶರ್ಮ ನೆಟ್ಫ್ಲಿಕ್ಸ್ನಲ್ಲಿ ತಮ್ಮ ವೈಯಕ್ತಿಕ ಬದುಕಿನ ಕಥೆ ಹೇಳಲು ಸಿದ್ಧರಾಗಿದ್ದಾರೆ.
“I am Not Done Yet” ಎಂಬ ಕಾರ್ಯಕ್ರಮದಲ್ಲಿ ಕಪಿಲ್ ಮಾತನಾಡಲಿದ್ದು, ಇದೇ ಜನವರಿ 28ರಿಂದ ಈ ಕಾರ್ಯಕ್ರಮ ಸ್ಟ್ರೀಮ್ ಆಗಲಿದೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈದರ ಬಗ್ಗೆ ಕಪಿಲ್ ಶರ್ಮ ಮಾಹಿತಿ ಹಂಚಿಕೊಂಡಿದ್ದಾರೆ. “ನಾನು 25 ವರ್ಷದಿಂದ ಹಾಸ್ಯ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಎಂದಿಗೂ ನಾನು ಹಾಸ್ಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಏಕೆಂದರೆ ನಾವು ಪಂಜಾಬಿಗಳು, ಸದಾ ಹಾಸ್ಯ ಮಾಡುತ್ತಲೇ ಇರುತ್ತೇವೆ. ಹಸ್ಯ ನಮ್ಮ ಸ್ವಾಭಾವಿಕ ಗುಣ ಕೂಡ ಹೌದು. ಇದರಿಂದ ನಾನು ಹಣ ಪಡೆಯಬಹುದು ಎಂದು ನನಗೆ ತಿಳಿದಿರಲಿಲ್ಲ”
“ಕಲಾವಿದರು ಆಂತರಿಕ ಧ್ವನಿ ಹೊಂದಿರುತ್ತಾರೆ. ನಾನು ಕ್ರಿಯೇಟಿವ್ ಕೆಲಸಗಳನ್ನು ಮಾಡುವುದು ಇನ್ನು ಮುಗಿದಿಲ್ಲ. ಇನ್ನು ಏನಾದರೂ ಮಾಡಬೇಕು ಎಂದು ಅಂದುಕೊಳ್ಳುತ್ತಿದ್ದೇನೆ. ಈ ನಿಟ್ಟಿನಲ್ಲಿ ನೆಟ್ಫ್ಲಿಕ್ಸ್ ನನ್ನನ್ನು ಆಕರ್ಷಿಸಿದೆ. ಅವರೂ ಕೂಡ ನನ್ನ ಕಥೆ ಕೇಳಲು ಕಾತುರದಿಂದಿದ್ದಾರೆ” ಎಂದು ಕಪಿಲ್ ಹೇಳಿದ್ದಾರೆ.
ಕಪಿಲ್ ಅವರ ವೈಯಕ್ತಿಕ ಜೀವನ ಹೇಗಿತ್ತು, ಹೇಗಿದೆ ಅವರು ಅನುಭವಿಸಿದ ಸುಖ ದುಃಖ ಎಲ್ಲವನ್ನೂ ಈ ವೇದಿಕೆಯಲ್ಲಿ ಹೇಳಿಕೊಳ್ಳಲಿದ್ದಾರೆ.