BengaluruPolitics

ಎನ್ ಡಿಎ ಕೂಟಕ್ಕೆ ಜೆಡಿಎಸ್ ಸೇರ್ಪಡೆ; ಹೆಚ್ ಡಿಕೆ ಹೇಳಿದ್ದೇನು?

ನವದೆಹಲಿ/ಬೆಂಗಳೂರು: ಒಳ್ಳೆಯ ದಿನ, ಒಳ್ಳೆಯ ಸಮಯ ನೋಡಿಕೊಂಡು ಯಾರಿಗೆಷ್ಟು ಕ್ಷೇತ್ರಗಳು ಎಂಬುದನ್ನು ದಸರಾ ನಂತರ ನಿರ್ಧಾರ ಮಾಡುತ್ತೇವೆ ಎಂದು ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿಯ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಜೆಡಿಎಸ್‌ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರ್ಪಡೆ ಆಗುವ ನಿಟ್ಟಿನಲ್ಲಿ ನವದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ನಿರ್ಣಾಯಕ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಈ ಸಭೆ ಅಮಿತ್‌ ಶಾ ಅವರ ನಿವಾಸದಲ್ಲಿ ನಡೆಯಿತು.

ಕರ್ನಾಟಕ ರಾಜ್ಯದಲ್ಲಿ ಹೊಸ ರಾಜಕೀಯ ಶಖೆ ಆರಂಭಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ, ಜೆಡಿಎಸ್‌ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆ ಆಗುವ ಬಗ್ಗೆ ಕೇಂದ್ರ ಗೃಹ ಸಚಿವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಜತೆ ಮಹತ್ವದ ಮಾತುಕತೆ ಸೌಹಾರ್ದ, ಪರಸ್ಪರ ವಿಶ್ವಾಸದಿಂದ ನಡೆಯಿತು ಎಂದರು ಅವರು.

ಮೈತ್ರಿ ಬಗ್ಗೆ ನಡೆದ ಮಾತುಕತೆ ನನಗೆ ಬಹಳ ಸಂತಸವಾಗಿದೆ. ಮುಂದೆ ಎಲ್ಲವೂ ಸುಗಮವಾಗಿ ನಡೆಯುತ್ತದೆ. ಯಾರು ಯಾರಿಗೆ ಎಷ್ಟು ಸೀಟು ಹಂಚಿಕೆ ಆಗುತ್ತದೆ ಎನ್ನುವುದು ಮುಖ್ಯವಲ್ಲ ಎಂದು ಅನೇಕ ಬಾರಿ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ರಾಜ್ಯದ 28 ಕ್ಷೇತ್ರಗಳಿಗೆ 28 ಅನ್ನು ಗೆಲ್ಲುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ವಿಷಯವನ್ನು ನಾನು ಬಿಜೆಪಿ ವರಿಷ್ಠರಿಗೆ ಒತ್ತಿ ಹೇಳಿದ್ದೇನೆ. ನನ್ನ ಮಾತಿಗೆ ಅವರೂ ಸಮಹಮತ ವ್ಯಕ್ತಪಡಿಸಿದರು ಎಂದು ಅವರು ತಿಳಿಸಿದರು.

ಬಿಜೆಪಿ ಸ್ಥಳೀಯ ನಾಯಕರನ್ನು ದೆಹಲಿ ಕರೆಸಿ ಮಾತುಕತೆ ನಡೆಸುವುದು, ನಂತರ ಎರಡೂ ಪಕ್ಷಗಳ ಹಿರಿಯರನ್ನು ಕರೆದು ಪರಸ್ಪರ ಸಮನ್ವಯತೆ ಮಾತುಕತೆ ನಡೆಸುವ ಹಾಗೂ ದಸರಾ ಹಬ್ಬದ ನಂತರ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಅಲ್ಲದೆ; ಈ ಮೈತ್ರಿ ದೀರ್ಘಕಾಲೀನವಾಗಿರಬೇಕು, ಇದರಲ್ಲಿ ರಾಜ್ಯದ ಹಿತ ಅಡಗಿರಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದು ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಮಾಧ್ಯಮಗಳು ಪದೇಪದೆ ಮೈತ್ರಿ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿಗಳು; ಬರೀ ಮೈತ್ರಿಯ ಬಗ್ಗೆಯಷ್ಟೇ ಕೇಳಬೇಡಿ. ಕಾವೇರಿ ವಿಷಯದ ಬಗ್ಗೆಯೂ ಕೇಳಿ. ನಾನಿಲ್ಲಿ ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಮಾತುಕತೆ ನಡೆಸಲು ಬಂದಿದ್ದೇನೆ. ಕಾವೇರಿ, ಬರ ಸೇರಿದಂತೆ ರಾಜ್ಯದ ಮುಂದಿರುವ ಸಮಸ್ಯೆಗಳ ಬಗ್ಗೆ ಬಿಜೆಪಿ ವರಿಷ್ಠರ ಗಮನ ಸೆಳೆದಿದ್ದೇನೆ ಎಂದರು.

ಈ ಮೈತ್ರಿಯಿಂದ ಕಾವೇರಿ ನೀರು ಸೇರಿದಂತೆ ನಮ್ಮ ರಾಜ್ಯಕ್ಕೆ ಆಗಿರುವ ಸಮಸ್ಯೆಗಳಿಗೆ ಉತ್ತಮ ಪರಿಹಾರ ಸಿಗುತ್ತದೆ. ಈ ಅಂಶವನ್ನು ಇಟ್ಟುಕೊಂಡೇ ನಾನು ಅಮಿತ್‌ ಶಾ ಮತ್ತು ನಡ್ಡಾ ಅವರೊಂದಿಗೆ ಮುಕ್ತವಾಗಿ ಚರ್ಚಿಸಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಮಾತುಕತೆ ಸಂದರ್ಭದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಪ್ರಮೋದ್‌ ಸಾವಂತ್‌, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಜೆಡಿಎಸ್‌ ರಾಜ್ಯ ಯುವಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಹಾಜರಿದ್ದರು.

Share Post