BengaluruPolitics

ಒಕ್ಕಲಿಗ ಮತಗಳು-40 ಸಾವಿರ, ಕುರುಬ ಮತಗಳು-28 ಸಾವಿರ..!; ಕೋಲಾರದಲ್ಲಿ ಗೆಲ್ತಾರಾ ಸಿದ್ದರಾಮಯ್ಯ..?

ಬೆಂಗಳೂರು; ಸಿದ್ದರಾಮಯ್ಯ ಕೋಲಾರದ ನೆಲದಲ್ಲಿ  ನಿಂತು ಇಲ್ಲಿ ಸ್ಪರ್ಧೆ ಮಾಡ್ತೀನಿ ಅಂತ ಘೋಷಣೆ ಮಾಡಿದ್ದಾರೆ… ಅದ್ಯಾರು ಧೈರ್ಯ ಕೊಟ್ಟರೋ ಏನೋ ಕೊನೆಗೂ ಸಿದ್ದರಾಮಯ್ಯಗೆ ಕೋಲಾರ ಫಿಕ್ಸ್‌ ಆಗಿದೆ.. ಹೈಕಮಾಂಡ್‌ ಇದಕ್ಕೆ ಒಪ್ಪಿಗೆ ಕೊಡೋದಷ್ಟೇ ಬಾಕಿ ಇದೆ.. ಅಂದಹಾಗೆ, ಈ ಬಾರಿ ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲೋದು ಅಷ್ಟು ಸುಲಭದ ಮಾತೇನಲ್ಲ.. ಯಾಕಂದ್ರೆ, ಕೋಲಾರ ಕಾಂಗ್ರೆಸ್‌ ಭಾರಿ ಗೊಂದಲಗಳಿವೆ.. ರಮೇಶ್‌ ಕುಮಾರ್‌ ಗುಂಪು ಹಾಗೂ ಕೆ.ಹೆಚ್‌.ಮುನಿಯಪ್ಪ ಗುಂಪು ಬೀದಿ ಬೀದಿಯಲ್ಲೇ ಜಗಳಕ್ಕೆ ನಿಲ್ಲುತ್ತವೆ… ಸಾಕಷ್ಟು ಬಾರಿ ಬಾರಿ ಇಂತಹ ಜಗಳಗಳು ನಡೆದಿವೆ… ಹೀಗಿರುವಾಗ ಸಿದ್ದರಾಮಯ್ಯ ಅದ್ಯಾವ ಧೈರ್ಯದ ಮೇಲೆ ಕೋಲಾರದಲ್ಲಿ ನಿಲ್ತೇನೆ ಅಂದ್ರೋ ಗೊತ್ತಿಲ್ಲ… ಸಿದ್ದರಾಮಯ್ಯರ ಈ ನಿರ್ಧಾರ ಭಂಡ ಧೈರ್ಯ ಅಂತಾನೇ ಹೇಳಬಹುದು…

ಸಿದ್ದರಾಮಯ್ಯ ಇಂದು ಕೋಲಾರಕ್ಕೆ ಪ್ರಯಾಣ ಬೆಳೆಸೋದಕ್ಕೂ ಮೊದಲು ಮಾಜಿ ಕೇಂದ್ರ ಸಚಿವ ಕೆ.ಹೆಚ್‌.ಮುನಿಯಪ್ಪ ಅವರ ನಿವಾಸಕ್ಕೆ ತೆರಳಿದ್ದರು.. ಅವರ ಜೊತೆ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ಮಾಡಿದರು.. ಅನಂತರ ಅವರನ್ನೂ ಕರೆದುಕೊಂಡು ಕೋಲಾರಕ್ಕೆ ಹೋದರು.. ಅಲ್ಲಿ ನಡೆದ ಬೃಹತ್‌ ಸಭೆಯಲ್ಲಿ ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.. ಆದ್ರೆ, ನಿಜವಾಗಿಯೂ ಕೆ.ಹೆಚ್‌.ಮುನಿಯಪ್ಪ ಅವರು ಹಾಗೂ ಅವರ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾರಾ ಅನ್ನೋದೇ ಈಗಿರುವ ಪ್ರಶ್ನೆ..

ಶ್ರೀನಿವಾಸಪುರ ಶಾಸಕ ರಮೇಶ್‌ ಕುಮಾರ್‌ ಅವರು ಸಿದ್ದರಾಮಯ್ಯಯ ಅವರ ಖಾಸಾ ಬೆಂಬಲಿಗರು… ಅವರು ಹೇಳಿದ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರು ಕೊತ್ತನೂರು ಮಂಜು ಹಾಗೂ ಚಿಂತಾಮಣಿಯ ಎಂ.ಸಿ.ಸುಧಾಕರ್‌ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಕಾಂಗ್ರೆಸ್‌ಗೆ ಬರ ಮಾಡಿಕೊಂಡರು.. ಇದೇ ರಮೇಶ್‌ ಕುಮಾರ್‌, ಎಂ.ಸಿ.ಸುಧಾಕರ್‌ ಹಾಗೂ ಕೊತ್ತನೂರು ಮಂಜು ಅವರು ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್‌.ಮುನಿಯಪ್ಪ ವಿರುದ್ಧವಾಗಿ ಕೆಲಸ ಮಾಡಿದ್ದರು.. ಈ ಕಾರಣಕ್ಕಾಗಿಯೇ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್‌.ಮುನಿಯಪ್ಪ ಸೋಲೋದಕ್ಕೆ ಕಾರಣವಾಯ್ತು.. ಇದ್ರಿಂದಾಗಿ ಮುನಿಯಪ್ಪ ಸಾಕಷ್ಟು ನೊಂದಿದ್ದಾರೆ.. ನನ್ನನ್ನು ಸೋಲಿಸಿದವರಿಗೆ ತಕ್ಕ ಪಾಠ ಕಲಿಸಬೇಕೆಂಬ ಹಠ ಅವರಲ್ಲಿದೆ.. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಕೋಲಾರಕ್ಕೆ ಭೇಟಿ ನೀಡಿ ಬಂದ ಮೇಲೆ ಮುನಿಯಪ್ಪ ಈ ಬಗ್ಗೆ ಮಾತನಾಡಿದ್ದೂ ಇದೆ.. ಅದಾದ ಮೇಲೆ ನಡೆದ ಸಭೆಯೊಂದರಲ್ಲಿ ಮುನಿಯಪ್ಪ ಹಾಗೂ ರಮೇಶ್‌ ಕುಮಾರ್‌ ಬೆಂಬಲಿಗರ ನಡುವೆ ವಾಗ್ವಾದ ಕೂಡಾ ಆಗಿದೆ… ಹೀಗಿದ್ದರೂ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ ಅಂದ್ರೆ ಅದು ಎಂಟೆದೆ ಧೈರ್ಯ ಎಂದೇ ಹೇಳಬೇಕು…

ಕೆ.ಹೆಚ್‌.ಮುನಿಯಪ್ಪ ದಲಿತ ನಾಯಕರು.. ಕೋಲಾರ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಗೆದ್ದಿದ್ದರು.. ಕಳೆದ ಬಾರಿ ಕಾಂಗ್ರೆಸ್‌ನಲ್ಲಿರುವವರೇ ಬಿಜೆಪಿಗೆ ಸಪೋರ್ಟ್‌ ಮಾಡಿದ್ದರಿಂದ ಅವರು ಸೋಲೋದಕ್ಕೆ ಕಾರಣವಾಯ್ತು.. ಇದನ್ನೇ ಮನಸ್ಸಲ್ಲಿಟ್ಟುಕೊಂಡು ಮುನಿಯಪ್ಪ ಅವರು ಸೈಲೆಂಟಾಗಿ ಸಿದ್ದರಾಮಯ್ಯ ವಿರುದ್ಧ ಪ್ರಚಾರ ಮಾಡಿದರೆ ಸಿದ್ದರಾಮಯ್ಯ ಗೆಲ್ಲೋದು ಕಷ್ಟವಾಗುತ್ತೆ.. ಯಾಕಂದ್ರೆ ಕೋಲಾರ ಕ್ಷೇತ್ರದಲ್ಲಿ ದಲಿತ ಮತಗಳೇ ಹೆಚ್ಚಿದ್ದು, ಅವರೇ ಮತಗಳು ಗೆಲ್ಲೋದಕ್ಕೆ ಇಲ್ಲಿ ನಿರ್ಣಾಯಕವಾಗುತ್ತವೆ.. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಸಿ, ಎಸ್‌ಟಿ ಮತಗಳು 62 ಸಾವಿರ ಇವೆ… ಇಲ್ಲಿ ದಲಿತರು ಬಹುತೇಕ ಕೆ.ಹೆಚ್‌.ಮುನಿಯಪ್ಪ ಹೇಳಿದಂತೆ ಕೇಳುತ್ತಾರೆ.. ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದರು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಮುನಿಯಪ್ಪ ಅವರು ಜೊತೆಗಿದ್ದುಕೊಂಡೇ ಬೇರೆ ಪಕ್ಷಕ್ಕೆ ಬೆಂಬಲ ಕೊಟ್ಟರೆ ಸಿದ್ದರಾಮಯ್ಯಗೆ ಸೋಲಾಗಬಹುದು.. ಆದ್ರೆ ಇಂದು ಬೆಳಗ್ಗೆ ಮುನಿಯಪ್ಪ ಅವರು ಸಿದ್ದರಾಮಯ್ಯ ಅವರಿಗೆ ಅದೇನು ಆಶ್ವಾಸನೆ ಕೊಟ್ಟರೋ ಗೊತ್ತಿಲ್ಲ.. ಸಿದ್ದರಾಮಯ್ಯ ಧೈರ್ಯವಾಗಿ ಕೋಲಾರದಲ್ಲಿ ಸ್ಪರ್ಧೆ ಮಾಡೋದಾಗಿ ಹೇಳಿಬಿಟ್ಟಿದ್ದಾರೆ..

ಇನ್ನು ಕೋಲಾರದಲ್ಲಿ ಕ್ಷೇತ್ರದಲ್ಲಿ 28 ಸಾವಿರ ಕುರುಬ ಮತಗಳಿವೆ… ಕುರುಬ ಸಮುದಾಯದ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದರೆ, ಅದೇ ಸಮುದಾಯದ ವರ್ತೂರ್‌ ಪ್ರಕಾಶ್‌ ಬಿಜೆಪಿಯಿಂದ ಹುರಿಯಾಳಾಗಿದ್ದಾರೆ.. ವರ್ತೂರ್‌ ಪ್ರಕಾಶ್‌ ಈಗಾಗಲೇ ಕೋಲಾರದಿಂದ ಎರಡು ಬಾರಿ ಗೆದ್ದಿದ್ದಾರೆ.. ಮೂರನೇ ಬಾರಿ ಸೋತಿದ್ದರೂ ಅವರ ಪ್ರಭಾವ ಇದೆ.. ಹೀಗಾಗಿ ಒಕ್ಕಲಿಗ ಮತಗಳು ಇಬ್ಬರಿಗೂ ಹಂಚಿಹೋಗಲಿವೆ.. ಇನ್ನು ಎಸ್ಸಿ, ಎಸ್ಟಿಯ ನಂತರದ ಸ್ಥಾನದಲ್ಲಿ ಮುಸ್ಲಿಂ ಮತಗಳಿವೆ.. ಇಲ್ಲಿ 51 ಸಾವಿರ ಮುಸ್ಲಿಂ ಮತದಾರರಿದ್ದಾರೆ… ದಲಿತರು ಒಂದಷ್ಟು ಕೈಕೊಟ್ಟರೂ ಮುಸ್ಲಿಮರು ಕೈಹಿಡಿಯುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಇಲ್ಲಿ ಸ್ಪರ್ಧೆಗೆ ತೀರ್ಮಾನ ಮಾಡಿರಬಹುದು.. ಆದ್ರೆ ಮುಸ್ಲಿಮರಲ್ಲೂ ಕೆಲವರು ವರ್ತೂರ್‌ ಪ್ರಕಾಶ್‌ ಪರ ಇದ್ದಾರೆ.. ಜೊತೆಗೆ ಜೆಡಿಎಸ್‌ ಬೆಂಬಲಿತ ಮುಸ್ಲಿಮರೂ ಇಲ್ಲಿ ಹೆಚ್ಚಿದ್ದಾರೆ.. ಹೀಗಾಗಿ ಎಲ್ಲಾ ಮುಸ್ಲಿಂ ಮತಗಳೂ ಸಿದ್ದರಾಮಯ್ಯ ಅವರಿಗೆ ಬರೋದಿಲ್ಲ…

ಇನ್ನು ಕೋಲಾರದಲ್ಲಿ ಮತ್ತೊಂದು ಪ್ರಬಲ ಸಮುದಾಯ ಒಕ್ಕಲಿಗರು.. ಇಲ್ಲಿ 40 ಸಾವಿರ ಒಕ್ಕಲಿಗ ಮತಗಳಿವೆ… ಅಷ್ಟೇ ಅಲ್ಲದೆ ಕೋಲಾರದಲ್ಲಿ ಜೆಡಿಎಸ್‌ಗೆ ಕೊಂಚ ಪ್ರಾಬಲ್ಯ ಇದೆ… ಕೋಲಾರದ ಕ್ಷೇತ್ರದಲ್ಲಿ ಕಳೆದ ಬಾರಿ ಕೂಡಾ ಜೆಡಿಎಸ್‌ ಗೆದ್ದಿದೆ.. ಈ ಹಿಂದೆ ಕೂಡಾ ಹಲವು ಬಾರಿ ಇಲ್ಲಿ ಜೆಡಿಎಸ್‌ ಗೆಲುವಿನ ನಗೆ ಬೀರಿದೆ.. ಹಾಲಿ ಶಾಸಕ ಶ್ರೀನಿವಾಸ ಗೌಡ ಜೆಡಿಎಸ್‌ನಿಂದಲೇ ಗೆದ್ದಿರೋದು.. ಆದ್ರೆ ಅವರೀಗ ಕಾಂಗ್ರೆಸ್‌ ಸೇರಿದ್ದಾರೆ.. ಆದರೂ ಕೂಡಾ ಒಕ್ಕಲಿಗರು ಜೆಡಿಎಸ್‌ ಕೈಹಿಡಿದರೆ ಸಿದ್ದರಾಮಯ್ಯಗೆ ಕಷ್ಟವಾಗಬಹುದು… ಮಾಜಿ ಸಿಎಂ ಕುಮಾರಸ್ವಾಮಿ ಈ ಬಾರಿ ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಮೇಲೆ ಹೆಚ್ಚು ಕಣ್ಣಿಟ್ಟಿದ್ದಾರೆ.. ಹೀಗಾಗಿಯೇ ಅವರು ಪಂಚರತ್ನ ಯಾತ್ರೆಯನ್ನು ಕೋಲಾರ ಜಿಲ್ಲೆಯಿಂದಲೇ ಶುರು ಮಾಡಿದ್ದಾರೆ..

ಈ ಎಲ್ಲಾ ಲೆಕ್ಕಾಚಾರಗಳಿಂದಾಗಿ ಮುನಿಯಪ್ಪ ಅವರು ಮುನಿಸಿಕೊಂಡು ಸಿದ್ದರಾಮಯ್ಯ ಅವರ ವಿರುದ್ಧವಾಗಿ ಕೆಲಸ ಮಾಡಿದರೆ, ಸಿದ್ದರಾಮಯ್ಯ ಕೋಲಾರದಲ್ಲಿ ಹರಸಾಹಸವೇ ಪಡಬೇಕಾಗುತ್ತದೆ… ಹೀಗಿದ್ದರೂ ಸಿದ್ದರಾಮಯ್ಯ ಅಧಿಕೃತವಾಗಿ ನನ್ನದು ಕೋಲಾರ ಕ್ಷೇತ್ರ ಎಂದು ಹೇಳಿಬಿಟ್ಟಿದ್ದಾರೆ… ಒಂದು ವೇಳೆ ಕೊನೇ ಕ್ಷಣದಲ್ಲಿ ಕೋಲಲಾರ ಕಗ್ಗಂಟಾದರೆ ಸಿದ್ದರಾಮಯ್ಯ, ಗೆಲ್ಲೋದಕ್ಕಾಗಿ ಕೋಲಾರದಲ್ಲೇ ಮೊಕ್ಕಾಂ ಹೂಡಬೇಕಾದ ಪರಿಸ್ಥಿತಿ ಬರಬಹುದು.. ಆಗ ಸಿಎಂ ಸ್ಥಾನದ ರೇಸ್‌ನಲ್ಲಿರುವ ಡಿ.ಕೆ.ಶಿವಕುಮಾರ್‌ ರಾಜ್ಯಾದ್ಯಂತ ಸುತ್ತಾಡಿ ಅವರ ಕೈ ಬಲಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು… ನೋಡ್ತಾ ಇದ್ರೆ ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲೇ ಕಟ್ಟಿ ಹಾಕೋ ಮಾಸ್ಟರ್‌ ಪ್ಲ್ಯಾನ್‌ ಏನಾದರೂ ಕಾಂಗ್ರೆಸ್‌ನಲ್ಲೇ ನಡೆದಿದೆಯಾ ಅನ್ನೋ ಅನುಮಾನ ಬರುತ್ತೆ…

Share Post