ಹುಟ್ಟುಹಬ್ಬದ ದಿನವೇ ಡಿಕೆಶಿ ಸಿಎಂ ಆಗೋದು ಪಕ್ಕಾ..?
ಬೆಂಗಳೂರು; ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಒನ್ ಲೈನ್ ರೆಸಲ್ಯೂಷನ್ ಪಾಸ್ ಮಾಡಲಾಗಿದೆ. ಶಾಸಕಾಂಗ ಪಕ್ಷದ ಅಧ್ಯಕ್ಷರ ಆಯ್ಕೆ ಜವಾಬ್ದಾರಿಯನ್ನು ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ ವಹಿಸಲಾಗಿದೆ. ಖರ್ಗೆಯವರೇ ನಿರ್ಧಾರ ಮಾಡಲಿ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಒಕ್ಕೊರಲ ನಿರ್ಧಾರಕ್ಕೆ ಬಂದಿದ್ದಾರೆ.
ಡಿ.ಕೆ.ಶಿವಕುಮಾರ್ ಬೆಳಗ್ಗೆಯಿಂದಲೂ ಹೈಕಮಾಂಡ್ ನಿರ್ಧಾರ ಮಾಡಲಿ ಎಂದು ಹೇಳುತ್ತಿದ್ದರು. ಇದೀಗ ಶಾಸಕಾಂಗ ಪಕ್ಷದ ಸಭೆಯಲ್ಲಿ ಅದೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಪಕ್ಕಾ ಎಂದು ಹೇಳಲಾಗುತ್ತಿದೆ.
ಹೈಕಮಾಂಡ್ ನಾಯಕರು ಡಿ.ಕೆ.ಶಿವಕುಮಾರ್ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರೂ ಕೂಡಾ ಡಿ.ಕೆ.ಶಿವಕುಮಾರ್ ಪರ ಇದ್ದಾರೆ ಎನ್ನಲಾಗಿದೆ. ಹೀಗಾಗಿ, ಖರ್ಗೆಯವರು ಡಿ.ಕೆ.ಶಿವಕುಮಾರ್ ಅವರನ್ನೇ ಸಿಎಂ ಮಾಡುವ ಸಾಧ್ಯತೆ ಇದೆ.
ನಾಳೆ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದ ದಿನವೇ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರಕ್ಕೆ ಆಸಕ್ತಿ ತೋರಿದ್ದಾರೆ. ಹೀಗಾಗಿ ಇಂದು ರಾತ್ರಿಯೇ ಶಾಸಕಾಂಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಅಂತಿಮವಾಗುವ ಸಾಧ್ಯತೆ ಇದೆ. ಅನಂತರ ಶಾಸಕಾಂಗ ಪಕ್ಷದ ಅಧ್ಯಕ್ಷರು ಸರ್ಕಾರ ರಚನೆಗೆ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಲಿದ್ದಾರೆ.
ಸಾಧ್ಯವಾದರೆ ನಾಳೆ ಹುಟ್ಟುಹಬ್ಬದ ದಿನದಂದೇ ಡಿ.ಕೆ.ಶಿವಕುಮಾರ್ ಒಬ್ಬರೇ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ಇದು ದೊಡ್ಡ ವಿಜಯವಾಗಿರುವುದರಿಂದ ಹೈಕಮಾಂಡ್ ನಾಯಕರೆಲ್ಲರೂ ಸಮಾರಂಭದಲ್ಲಿ ಭಾಗವಹಿಸುವುದರಿಂದ ನಾಳೆ ಸಿಎಲ್‌ಪಿ ನಾಯಕನ ಘೋಷಣೆ ಮಾಡಿ, ಹುಟ್ಟುಹಬ್ಬಕ್ಕೆ ಡಿಕೆಶಿಗೆ ಗಿಫ್ಟ್ ಕೊಡೋದು, ಮೇ 18ರಂದು ದೊಡ್ಡದಾಗಿ ಪ್ರಮಾಣವಚನ ಮಾಡಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.