BengaluruPolitics

ಯತೀಂದ್ರ ಪ್ರಸ್ತಾಪಿಸಿದ ಮಹದೇವ್‌ ಯಾರು..?; ಈ ಅಧಿಕಾರಿ ವಿರುದ್ಧ ಇರೋ ದೂರುಗಳೇನು..?

ಬೆಂಗಳೂರು; ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ಗ್ರಾಮವೊಂದರಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಮಧ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕರೆ ಮಾಡುತ್ತಾರೆ. ಈ ವೇಳೆ ನಾಲ್ಕೈದು ಹೆಸರುಗಳ ಲಿಸ್ಟ್‌ ಬಗ್ಗೆ ಮಾತನಾಡುತ್ತಾರೆ. ಈ ವೇಲೆ ಆ ಮಹದೇವ್‌ಗೆ ಕೊಡಿ ಎಂದು ಹೇಳುತ್ತಾರೆ. ಅವರ ವಿರುದ್ಧ ಗರಂ ಆಗುತ್ತಾರೆ. ನಾನು ಕೊಟ್ಟ ನಾಲ್ಕೈದು ಹೆಸರುಗಳಷ್ಟೇ ಕೊಡಿ ಎಂದು ತಾಕೀತು ಮಾಡುತ್ತಾರೆ. ಹೀಗಾಗಿ ಆ ಮಹದೇವ್‌ ಯಾರು ಎಂಬುದರ ಬಗ್ಗೆ ಕುತೂಹಲ ಉಂಟಾಗಿದೆ.

ಅಂದಹಾಗೆ, ಆರ್‌.ಮಹದೇವ್‌ ಎಂಬುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ. ಇವರು ಈ ಮೊದಲು ಸಬ್‌ ರಿಜಿಸ್ಟ್ರಾರ್‌ ಆಗಿದ್ದರು. ಮಹದೇವ್‌ ಅವರು ಯತೀಂದ್ರ ಸಿದ್ದರಾಮಯ್ಯ ಅವರಿಗೆ ಆಪ್ತರು ಹಾಗೂ ಸಂಬಂಧಿ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿ ಮಹದೇವ್‌ ಅವರ ವಿರುದ್ಧ ಹಲವು ಸಚಿವರು ಕೂಡಾ ಈ ಹಿಂದೆ ಆರೋಪಗಳನ್ನು ಮಾಡಿದ್ದರು. ವರ್ಗಾವಣೆ ವಿಚಾರವಾಗಿ ಕೆಲ ಸಚಿವರು ಮಹದೇವ್‌ ವಿರುದ್ಧ ಗರಂ ಆಗಿದ್ದರು ಎಂದು ತಿಳಿದುಬಂದಿದೆ. ಕಾರ್ಮಿಕ ಇಲಾಖೆಯಲ್ಲೂ ಮಹದೇವ್‌ ಮಧ್ಯಪ್ರವೇಶ ಮಾಡಿದ್ದರು ಎಂದು ಸಚಿವ ಸಂತೋಷ್‌ ಲಾಡ್‌ ಆರೋಪ ಮಾಡಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದರು ಎನ್ನಲಾಗಿದೆ.

ಸಚಿವರಿಗೆ ಯಾವುದೇ ಮಾಹಿತಿ ನೀಡದೆ ಅಧಿಕಾರಿ ಮಹದೇವ್ ವರ್ಗಾವಣೆ ಪಟ್ಟಿ ರೆಡಿ ಮಾಡಿದ್ದರು. ಮುಖ್ಯಮಂತ್ರಿ ಅವರ ಒಪ್ಪಿಗೆ ಪಡೆದುಕೊಳ್ಳುವ ವೇಳೆ ಮಹದೇವ್‌ ಅವರು 40 ಮಂದಿಯ ಹೆಚ್ಚುವರಿ ಲಿಸ್ಟ್ ರೆಡಿ ಮಾಡಿದ್ದರು ಎನ್ನಲಾಗಿದೆ. ಮಹದೇವ್ ಅವರ ನಡೆಗೆ ಕೆಂಡಾಮಂಡಲರಾಗಿದ್ದ ಸಚಿವ ಸಂತೋಷ್ ಲಾಡ್, ಅವರನ್ನು ಹುದ್ದೆಯಿಂದ ತಕ್ಷಣ ಬದಲಾಯಿಸುವಂತೆ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದರು.

ಯತೀಂದ್ರ ಅವರ ಲಿಸ್ಟ್‌ ವಿಚಾರದಲ್ಲೂ ಮಹದೇವ್‌ ಅದೇ ಕೆಲಸ ಮಾಡಿದ್ದು, ಯತೀಂದ್ರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

 

Share Post