BengaluruPolitics

ಜನವರಿ 22ರಂದು ಸರ್ಕಾರಿ ರಜೆ ಘೋಷಿಸಲು ವಿಜಯೇಂದ್ರ ಮನವಿ

ಬೆಂಗಳೂರು; ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಇದೇ 22ರಂದು ನಡೆಯಲಿದೆ. ಆ ದಿನ ಅಶಾಂತಿ, ಅಡ್ಡಿ ಆತಂಕ, ಅಹಿತಕರ ಘಟನೆ ಉಂಟಾಗದಂತೆ ರಾಜ್ಯ ಸರಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 22ರಂದು ಸರಕಾರಿ ರಜೆ ಘೋಷಿಸಲು ಮನವಿ ಮಾಡಿದರು. ಪಿವಿಆರ್ ಚಿತ್ರಮಂದಿರಗಳಲ್ಲಿ ನೇರ ಪ್ರಸಾರ ಇರಲಿದೆ. ಜನರು ಉತ್ತರಾಭಿಮುಖವಾಗಿ 5 ದೀಪ ಬೆಳಗಿಸಲು ವಿನಂತಿಸಿದರು.
ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಘಳಿಗೆಗೆ ರಾಮಭಕ್ತರಷ್ಟೇ ಅಲ್ಲ; ಇಡೀ ಜಗತ್ತಿನ ಅನೇಕ ದೇಶಗಳಲ್ಲಿ ಕೂಡ ಉತ್ಸಾಹ ಕಾಣುತ್ತಿದೆ. ಪ್ರಭು ಶ್ರೀರಾಮಚಂದ್ರ ಮತ್ತು ಕರ್ನಾಟಕದ ಸಂಬಂಧ ನಿನ್ನೆ ಮೊನ್ನೆಯದಲ್ಲ. ರಾಮಾಯಣ ಯುಗದಿಂದ ಈ ಸಂಬಂಧ ಇದೆ. ಸೀತಾಮಾತೆಯ ಅಪಹರಣದ ನಂತರ ಶ್ರೀರಾಮನು ಲಕ್ಷ್ಮಣನ ಜೊತೆ ಕಿಷ್ಕಿಂಧೆಗೆ (ಇಂದಿನ ಹಂಪಿ) ಪ್ರಯಾಣ ಬೆಳೆಸಿದ ಕುರುಹುಗಳಿವೆ. ಕೊಪ್ಪಳದ ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮಭೂಮಿ ಎಂದು ವಿವರಿಸಿದರು.

ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಟಾರ್ಗೆಟ್?
ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್ ಸಾಮಾನ್ಯ ವ್ಯಕ್ತಿ ಅಲ್ಲ. ಅವರೂ ಹೇಳಿಕೆ ಕೊಟ್ಟಿದ್ದಾರೆ. ಆದ್ದರಿಂದ ಅಹಿತಕರ ಘಟನೆ ಆಗದಂತೆ ರಾಜ್ಯ ಸರಕಾರ ಮುನ್ನೆಚ್ಚರಿಕೆ ವಹಿಸಲಿ ಎಂದು ಅವರು ಪ್ರಶ್ನೆಗೆ ಉತ್ತರವಾಗಿ ಒತ್ತಾಯಿಸಿದರು. ಬಿ.ಕೆ.ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿದೆಯೇ ಅಥವಾ ಕೇಂದ್ರ ಸರಕಾರವೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ನುಡಿದರು.

Share Post