Bengaluru

ಕಾವೇರಿ ವಿಚಾರದಲ್ಲಿ ಎಡವಿತಾ ರಾಜ್ಯ ಕಾಂಗ್ರೆಸ್‌ ಸರ್ಕಾರ..?

ಕರ್ನಾಟಕದಲ್ಲಿ ಕಾವೇರಿ ಹೋರಾಟ ಜೋರಾಗಿದೆ. ಮಂಡ್ಯ, ಮೈಸೂರು ಭಾಗದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇನ್ನು ನಾಳೆ (ಸೆಪ್ಟೆಂಬರ್‌ 26) ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ರೈತ ಮುಖಂಡ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ದೊಡ್ಡ ಹೋರಾಟ ರೂಪಿಸಲಾಗಿದೆ. ಸುಮಾರು 90ಕ್ಕೂ ಹೆಚ್ಚು ಸಂಘಟನೆಗಳು ನಾಳೆಯ ಬಂದ್‌ಗೆ ಬೆಂಬಲ ಸೂಚಿಸಿವೆ. ರೈತ ಸಂಘಟನೆಗಳು, ಹಲವು ಕನ್ನಡಪರ ಸಂಘಟನೆಗಳು, ಚಿತ್ರರಂಗ, ಥೀಯೇಟರ್‌ ಮಾಲೀಕರುಗಳು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಹೋಟೆಲ್‌ ಮಾಲೀಕರಲ್ಲಿ ಒಮ್ಮತ ಮೂಡಿಲ್ಲ. ಇನ್ನು ಬಸ್‌ ಚಾಲಕರು ಕೂಡಾ ಇನ್ನೂ ಗೊಂದಲದಲ್ಲೇ ಇದ್ದಾರೆ. ಆದ್ರೆ, ಕಾವೇರಿ ವಿಚಾರವಾದ್ದರಿಂದ ಬಹುತೇಕ ನಾಳೆ ಬಂದ್‌ ಯಶಸ್ವಿಯಾಗಲಿದೆ ಎಂದೇ ಹೇಳಲಾಗುತ್ತಿದೆ.

ಇನ್ನೊಂದೆಡೆ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಸೆಪ್ಟೆಂಬರ್‌ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೂ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಇಂದು ಖಾಸಗಿ ಹೋಟೆಲ್‌ನಲ್ಲಿ ಸಸಭೆ ನಡೆಸಿ, ಸೆಪ್ಟೆಂಬರ್‌ 29ರಂದು ಕರ್ನಾಟಕ ಬಂದ್‌ ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ ಒಂದೇ ವಾರದಲ್ಲಿ ಎರಡು ದಿನ ಬಸ್‌ ಬಿಸಿ ತಟ್ಟಲಿದೆ. ಲೋಕಸಭಾ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಇಂತಹ ಎರಡೆರಡು ದೊಡ್ಡ ಹೋರಾಟಗಳು ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರಕ್ಕೆ ಬರ ಹಾಗೂ ಕಾವೇರಿ ವಿಚಾರ ದೊಡ್ಡ ತಲೆನೋವಾಗಿದೆ. ಕಾವೇರಿ ಸಮಸ್ಯೆಯನ್ನು ಪರಿಹರಿಸುವುದೇ ರಾಜ್ಯ ಸರ್ಕಾರಕ್ಕೆ ಕಗ್ಗಂಟಾಗಿದೆ. ಮಳೆ ಕಡಿಮೆಯಾಗಿದ್ದರಿಂದ ರಾಜ್ಯದ ಜಲಾಶಯಗಳಲ್ಲೇ ನೀರಿಲ್ಲ. ಹೀಗಿರುವಾಗಲೇ ಸುಪ್ರೀಂ ಕೋರ್ಟ್‌ ತಮಿಳುನಾಡಿಗೆ ನೀರು ಬಿಡಬೇಕೆಂದು ಆದೇಶ ಮಾಡಿದೆ. ಕೋರ್ಟ್‌ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಪಾಲಿಸಿದರೆ ಕುಡಿಯುವುದಕ್ಕೂ ನೀರಿಲ್ಲದೆ ರಾಜ್ಯದ ಪರದಾಡಬೇಕಾಗುತ್ತದೆ. ಹೀಗಾಗಿ, ರಾಜ್ಯ ಸರ್ಕಾರ ದಿಕ್ಕು ಕಾಣದಾಗಿದೆ.

ಈ ಸಂದರ್ಭವನ್ನು ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸಮರ್ಥವಾಗಿ ಬಳಸಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗಿವೆ. ಕಾವೇರಿ ಹೋರಾಟಗಾರರಿಗೆ ಬೆಂಬಲ ನೀಡುತ್ತಲೇ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ರಾಜ್ಯ ಸರ್ಕಾರವೇ ತಮಿಳುನಾಡಿಗೆ ಈಗಾಗಲೇ ಸಾಕಷ್ಟು ನೀರು ಬಿಟ್ಟಿದೆ. ಕೊನೆಯ ಕ್ಷಣದಲ್ಲಿ ಈಗ ಕೇಂದ್ರ ಮುಂದೆ ಒತ್ತಡ ಹೇರುತ್ತಿದೆ. ಈ ಕೆಲಸವನ್ನು ಈ ಮೊದಲೇ ಮಾಡಬೇಕಿತ್ತು. ಸುಪ್ರೀಂಕೋರ್ಟ್‌ನಲ್ಲೂ ಸಮರ್ಥವಾಗಿ ವಾದ ಮಂಡನೆ ಮಾಡಬೇಕಿತ್ತು ಎಂದು ವಿಪಕ್ಷಗಳು ಹೇಳುತ್ತಿವೆ. ಇನ್ನೊಂದೆಡೆ ಲೋಕಸಭಾ ಚುನಾವಣೆಗಾಗಿ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ಒಂದಾಗಿವೆ. ಚುನಾವಣಾ ಮೈತ್ರಿ ಮಾಡಿಕೊಂಡಿವೆ. ಈಗ ಎರಡೂ ಪಕ್ಷಗಳ ನಾಯಕರು ಒಮ್ಮತದಿಂದ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್‌ ಹಿನ್ನಡೆಗೆ ಕಾರಣವಾಗಬಹುದು.

ಕಾವೇರಿ ವಿಚಾರ ರಾಜ್ಯದ ಅದರಲ್ಲೂ ಮಂಡ್ಯ, ಮೈಸೂರು ಭಾಗದ ರೈತರ ಜೀವನದ ವಿಚಾರ. ಅಷ್ಟೇ ಅಲ್ಲ, ನೀರು ಕಡಿಮೆಯಾದರೆ ಬೆಂಗಳೂರು ನಗರಕ್ಕೂ ಕುಡಿಯುವ ನೀರು ಸಿಗೋದಿಲ್ಲ. ಇದೊಂದು ಭಾವನಾತ್ಮಕ ವಿಚಾರ. ಇದಕ್ಕಾಗಿ ಎಲ್ಲರೂ ಹೋರಾಟ ಮಾಡಲೇಬೇಕಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಒಂದು ದಿಟ್ಟ ನಿರ್ಧಾರ ತೆಗೆದುಕೊಳ್ಳಬಹುದು. ಏನೇ ಆಗಲಿ ತಮಿಳುನಾಡಿಗೆ ನೀರು ಬಿಡಲ್ಲ ಎಂದಿದ್ದರೆ ಸಿಎಂ ಸಿದ್ದರಾಮಯ್ಯ ಹೀರೋ ಆಗಿಬಿಡುತ್ತಿದ್ದರೇನೋ. ಆದ್ರೆ ಅವರು ಹಾಗೆ ಮಾಡಲಿಲ್ಲ. ಕೇವಲ ಕೇಂದ್ರ ಸರ್ಕಾರದ ಕಡೆ ಬೆಟ್ಟು ತೋರಿಸಿ ಎಡವಿದಂತೆ ಕಾಣುತ್ತಿದೆ.

ಈ ಸಂದರ್ಭವನ್ನು ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ಅಂದಹಾಗೆ, ಮಂಡ್ಯ, ಮೈಸೂರು ಭಾಗದಲ್ಲೇ ಜೆಡಿಎಸ್‌ ಪ್ರಬಲವಾಗಿದ್ದದ್ದು. ಆದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಈ ಭಾಗದಲ್ಲಿ ಪ್ರಾಬಲ್ಯ ಮೆರೆದಿತ್ತು. ಆದ್ರೆ, ಒಂದಾಗಿರುವ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ಕಾವೇರಿ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಹಾರಿಹಾಯುತ್ತಿವೆ. ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ.

ಇನ್ನು ಕಾವೇರಿ ನದಿ ನೀರು ಹಂಚಿಕೆ ಸಂಬಂಧವಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಕ್ಕೆ ಆಗ್ರಹಿಸಿ ಪಿಎಂ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿಗಳಾದ ಹೆಚ್​ಡಿ ದೇವೇಗೌಡರು ಪತ್ರ ಬರೆದಿದ್ದಾರೆ. ಕರ್ನಾಟಕದ ರೈತರಿಗೆ ನೀರಿನ ಕೊರತೆ ಉಂಟಾಗಿದ್ದು, ಶೀಘ್ರವಾಗಿ ವಿವಾದ ಬಗೆಹರಿಸಲು ಕೋರಿ ಪತ್ರ ಬರೆಯಲಾಗಿದೆ. ಇತ್ತ ಮಾಧ್ಯಮಗಳ ಜೊತೆ ಕಾವೇರಿ ನದಿ ನೀರು ಹಂಚಿಕೆ ಕುರಿತು ಮಾತನಾಡಿದ ದೇವೇಗೌಡು, ಈ ವಿಷಯದಲ್ಲಿ ರಾಜಕೀಯ ಮಾಡಲ್ಲ. ಕಳೆದ ಅರವತ್ತು ವರ್ಷದಿಂದ ಈ ವಿಷಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ನಿಲುವನ್ನ ಖಂಡಿಸಿದ್ದೇನೆ ಎಂದು ಹೇಳಿದರು.

ನಾಡಿನ‌ ಜನರ ಸಂಕಷ್ಟಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್​ ವಿರುದ್ಧವೂ ಹೋರಾಟ ಮಾಡಿದ್ದೇನೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ನಮ್ಮ ರಾಜ್ಯದಲ್ಲಿ ನಾಲ್ವರು ಸಚಿವರು ಇದ್ರೂ ಯಾರೂ ಮಾತನಾಡಲಿಲ್ಲ. ನಾನು ಒಬ್ಬನೇ ಸಂಸದನಾಗಿ ಹೋರಾಟ ಮಾಡಿದ್ದೇನೆ ಎಂದರು. ಇವತ್ತು ಈ ಪಕ್ಷ ಇರೋದು ಕೇವಲ ಅಧಿಕಾರಕ್ಕೊಸ್ಕರಕ್ಕೆ ಅಲ್ಲ. ನಾನು ಸ್ವಾಭಿಮಾನದಿಂದ ಹೇಳ್ತೇನೆ ಕುಮಾರಸ್ವಾಮಿ ದೆಹಲಿಯಿಂದ ಬಂದ ಕೂಡಲೇ ಡ್ಯಾಂಗೆ ಹೋಗಿ ರೈತರಿಗೆ ಸಾಥ್ ಕೊಟ್ಟರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸುವುದೇ ಪರಿಹಾರ. ಈ ವಿಚಾರವಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಅವರು ಪ್ರಧಾನಿಗೆ ಪತ್ರ ಬರೆದಿರುವುದನ್ನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾವೇರಿ ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಸಂದರ್ಭದಲ್ಲಿ ಮತ್ತು ಕರ್ನಾಟಕ ಬರದಿಂದ ತತ್ತರಿಸಿರುವುದನ್ನು ಗಮನಿಸಿ ದೇವೇಗೌಡರು ಪ್ರಧಾನಿಗೆ ಮಧ್ಯ ಪ್ರವೇಶಿಸುವಂತೆ ಪತ್ರ ಬರೆದಿದ್ದಾರೆ. ಅವರ ನಿಲುವನ್ನು ಸ್ವಾಗತಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Share Post