ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ತಲೆನೋವು; ಇಂದೂ ಮುಂದುವರೆದ ಸಭೆ
ಬೆಂಗಳೂರು; ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಂತಿಮ ಮಾಡೋದಕ್ಕೆ ಆಗದೇ ತಲೆ ಮೇಲೆ ಕೈಹೊತ್ತು ಕುಳಿತಿದೆ. ಈ ಬಾರಿ ಕಾಂಗ್ರೆಸ್ ಉತ್ತಮ ವಾತಾವರಣವಿರುವುದರಿಂದ ಬಹುತೇಕ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ನಾಲ್ಕೈದು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಸಮರ್ಥರು ಹಾಗೂ ಗೆಲ್ಲುವ ಸಾಮರ್ಥ್ಯ ಹೊಂದಿರುವವರೇ ಆದ್ದರಿಂದ ಅಂತಿಮ ಪಟ್ಟಿ ಸಿದ್ಧಪಡಿಸಲಾಗದೇ ಕಾಂಗ್ರೆಸ್ ನಾಯಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಫೈನಲ್ ಮಾಡಲಾಗಿದೆ. ಆದ್ರೆ 104 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ದೊಡ್ಡ ಕಸರತ್ತು ನಡೆಯುತ್ತಿದೆ. ಈ 104 ಕ್ಷೇತ್ರಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಪ್ರಬಲ ಆಕಾಂಕ್ಷಿಗಳಿದ್ದಾರೆ. ಯಾರನ್ನೇ ಫೈನಲ್ ಮಾಡಿದರೂ ಮತ್ತೊಬ್ಬರಿಗೆ ನಿರಾಸೆಯಾಗುತ್ತದೆ. ಆ ಬಂಡಾಯವೇಳುವ ಅಪಾಯವಿದೆ. ಇದನ್ನರಿತೇ ಕಾಂಗ್ರೆಸ್ ನಾಯಕರು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಫೈಟ್ ಇರುವ ಕ್ಷೇತ್ರಗಳ ಆಕಾಂಕ್ಷಿಗಳ ಮನವೊಲಿಸಿ, ಅವರಿಗೆ ಬೇರೊಂದು ಹುದ್ದೆ ನೀಡುವ ಆಶ್ವಾಸನೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಟಿಕೆಟ್ ಸಿಗದಿದ್ದರೆ ಕೆಲವರು ಪಕ್ಷಾಂತರ ಮಾಡುವ ಸಾಧ್ಯತೆ ಇದೆ. ಹೀಗಾಗಿಯೇ ಯಾರೂ ಬಂಡಾಯ ಅಥವಾ ಪಕ್ಷಾಂತರವಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ನಾಯಕರು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಅಭ್ಯರ್ಥಿ ಆಯ್ಕೆ ಕುರಿತಂತೆ ಮೊನ್ನೆಯಿಂದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ನಡೆಯುತ್ತಿದೆ. ಅದು ನಿನ್ನೆಯೇ ಮುಕ್ತಾಯವಾಗಬೇಕಿತ್ತು. ಆದ್ರೆ ಒಮ್ಮತದ ಅಭ್ಯರ್ಥಿಗಳ ಆಯ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದೂ ಕೂಡಾ ಮೀಟಿಂಗ್ ಮುಂದುವರೆಸಲಾಗಿದೆ.