BengaluruPolitics

ಅಕ್ಕಿ ಕೊಡದೆ ಕೇಂದ್ರ ಸರ್ಕಾರ ಅನ್ನಭಾಗ್ಯಕ್ಕೆ ಅಡ್ಡಿ ಮಾಡುತ್ತಿದೆ; ಸಿಎಂ ಸಿದ್ದರಾಮಯ್ಯ

ಬೆಂಗಳೂರು; ನಾವು ಅಂತ್ಯೋದಯ ಹಾಗೂ ಬಿಪಿಎಲ್‌ ಕಾರ್ಡ್‌ ದಾರರಿಗೆ ತಲಾ ಹತ್ತು ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ ಎಂದು ಘೋಷಿಸಿದ್ದೇವೆ. ಮುಂದಿನ ತಿಂಗಳಿಂದ ಅಕ್ಕಿ ವಿತರಣೆ ಮಾಡಬೇಕು. ಇದಕ್ಕೆ ಹಣ ತೆಗೆದುಕೊಂಡು ಅಕ್ಕಿ ಪೂರೈಕೆ ಮಾಡುತ್ತೇವೆ ಎಂದು ಹೇಳಿದ್ದ ಕೇಂದ್ರ ಸರ್ಕಾರ, ಬೇಕಂತಲೇ ಅಕ್ಕಿ ಇಲ್ಲ ಎಂದು ಹೇಳುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡು ಕನ್ನಡಿಗರ ಪಾಲು, ಬಡವರ ಪಾಲನ್ನು ಕಸಿದುಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಮುಂದಿನ ತಿಂಗಳಿಂದ ಅನ್ನಭಾಗ್ಯ ಅಕ್ಕಿ ನೀಡಲು ನಾವು ತೀರ್ಮಾನಿಸಿದ್ದೇವೆ. ಹೀಗಾಗಿ ಭಾರತೀಯ ಆಹಾರ ಮಂಡಳಿ ಉಪಪ್ರಧಾನ ವ್ಯವಸ್ಥಾಪಕರಿಗೆ 2.28 ಲಕ್ಷ ಮೆಟ್ರಿಕ್‌ ಟನ್ ಅಗತ್ಯವಿದೆ ಎಂದು ನಾವು ಪತ್ರ ಬರೆದಿದ್ದೆವು. ಜೂನ್‌ 9ರಂದು ಬರೆದಿದ್ದ ಪತ್ರಕ್ಕೆ ಅವರು ಒಪ್ಪಿಗೆ ಸೂಚಿಸಿ ಜೂನ್‌ 12ರಂದು ಕ್ವಿಂಟಾಲ್‌ಗೆ 3,400 ರೂ. ದರದಲ್ಲಿ ಅಕ್ಕಿ ಪೂರೈಕೆ ಮಾಡವುದಾಗಿ ಭಾರತೀಯ ಆಹಾರ ಮಂಡಳಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದ್ರೆ ಇದೀಗ ಅಕ್ಕಿ ಇಲ್ಲ ಎಂದು ಕೇಂದ್ರ ಸರ್ಕಾರ ಬೇರೆಯದೇ ನಿರ್ಧಾರ ತೆಗೆದುಕೊಂಡಿದೆ ಎಂದು ಸಿಎಂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಜೂನ್‌ 13 ರಂದು ಭಾರತ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದಿದೆ. 15 ಲಕ್ಷ ಮೆಟ್ರಿಕ್‌ ಟನ್ ಗೋಧಿ ಹಾಗೂ ಅಕ್ಕಿಯನ್ನು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಯೋಜನೆಯಡಿ ಮಾರಾಟ ಮಾಡಲು ಸೂಚನೆ ಕೊಟ್ಟಿದೆ. ಅಲ್ಲದೇ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಇತರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಈ ಪತ್ರದ ವಿವರಗಳನ್ನು ಸಿಎಂ ಸಿದ್ದರಾಮಯ್ಯ ಓದಿ ಹೇಳಿದ್ದಾರೆ.

ಎಫ್‌ಸಿಐ ಒಪ್ಪಿಗೆ ಪತ್ರದ ಆಧಾರದ ಮೇಲೆ ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತೇವೆ ಎಂದು ನಾವು ಘೋಷಿಸಿದೆವು. ಎಫ್‌ಸಿಐನ ಪ್ರಧಾನ ವ್ಯವಸ್ಥಾಪಕ ಹರೀಶ್ ಅವರು 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ತಿಳಿಸಿದ್ದರು. ಆದರೂ ಅಕ್ಕಿ ನೀಡುತ್ತಿಲ್ಲ ಎಂದು ಸಿಎಂ ಹೇಳಿದರು. ಭತ್ತ ಬೆಳೆಯುವ ರಾಜ್ಯಗಳಾದ ಪಂಜಾಬ್, ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್‍ಗಢ, ಹರಿಯಾಣ ಸರ್ಕಾರಗಳಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಆದ್ರೆ ಪಂಜಾಬ್ ರಾಜ್ಯದಲ್ಲಿ ಅಕ್ಕಿ ಸಂಗ್ರಹವಿಲ್ಲವಂತೆ. ಹೀಗಾಗಿ ಅವರು ಸಧ್ಯಕ್ಕೆ ಅಕ್ಕಿ ಪೂರೈಸಲು ಆಗೋದಿಲ್ಲ ಎಂದಿದ್ದಾರೆ.

ನಾಳೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್‌.ಮುನಿಯಪ್ಪ ನಾಳೆ ತೆಲಂಗಾಣ ಸಿಎಂ ಅವರನ್ನು ಭೇಟಿ ಮಾಡಲಿದ್ದಾರೆ. ಛತ್ತಿಸ್‌ ಘಢ ಸರ್ಕಾರ ಸರ್ಕಾರದ ಜೊತೆಗೂ ಮಾತುಕತೆ ನಡೆಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Share Post