ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ; ವಿಪಕ್ಷ ನಾಯಕ ಸಿದ್ದರಾಮಯ್ಯ
ಬೆಂಗಳೂರು; ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ. ಮೋದಿ, ಅಮಿತ್, ಕಟೀಲ್, ಬೊಮ್ಮಾಯಿ ಎಲ್ಲರೂ ಬರೀ ಸುಳ್ಳು ಹೇಳುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನನ್ನ ರಾಜಕೀಯ ಜೀವನದಲ್ಲೇ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ ಎಂದಿರುವ ಸಿದ್ದರಾಮಯ್ಯ, ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಲಂಚ ಪ್ರಕರಣವನ್ನು ಉದಾಹರಿಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನಾವು ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ಹೇಳುತ್ತಲೇ ಬಂದಿದ್ದೇವೆ. ಆದ್ರೆ ಸಿಎಂ ಬೊಮ್ಮಾಯಿ ಅದಕ್ಕೆ ದಾಖಲೆ ಕೊಡಿ ಎನ್ನುತ್ತಿದ್ದರು. ಈಗ ಅವರ ಶಾಸಕರ ಪುತ್ರನೇ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇದಕ್ಕಿಂತ ಸಾಕ್ಷ್ಯ ಏನು ಬೇಕು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ನಾವು ಆರೋಪ ಮಾಡಿದರೆ ಹಿಂದಿನ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆದಿದೆ ಅಂತಾರೆ. ಭ್ರಷ್ಟಾಚಾರ ನಡೆದಿದ್ದರೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.