2ನೇ ಅಲೆಯಲ್ಲಷ್ಟೇ ವೈರಸ್ ಡೇಂಜರ್: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು: ಒಮಿಕ್ರಾನ್ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಅದರ ವರದಿ ಬಂದ ಮೇಲಷ್ಟೇ ಅದರ ತೀವ್ರತೆ ಬಗ್ಗೆ ತಿಳಿಯಲಿದೆ. ಅಲ್ಲಿಯವರೆಗೆ ಜನರು ಎಚ್ಚರದಿಂದಿರಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಯಾವುದೇ ವೈರಸ್ ಎರಡನೇ ಅಲೆಯಲ್ಲಿ ತೀವ್ರವಾಗಿ ತೊಂದರೆ ಕೊಡುತ್ತದೆ. ನಂತರ ರೂಪಾಂತರಗಳಲ್ಲಿ ಸೌಮ್ಯವಾಗುತ್ತಾ ಹೋಗುತ್ತದೆ. ಹೀಗಾಗಿ, ಒಮಿಕ್ರಾನ್ ಸೋಂಕು ಹೆಚ್ಚು ಅಪಾಯಕಾರಿಯಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕೊರೋನಾ ಸೋಂಕು ಇಲ್ಲದಂತಾಗುತ್ತದೆ. ಅಲ್ಲಿಯವರೆಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದರು.
ಒಮಿಕ್ರಾನ್ ಸೋಂಕಿತರು ಆರಾಮಾಗಿದ್ದಾರೆ. ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಇನ್ನು ಅವರ ಸಂಪರ್ಕಿತರೆಲ್ಲರೂ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಲಸಿಕೆ ಪಡೆದವರಿಗೆ ಸೋಂಕು ಹೆಚ್ಚು ಬಾಧಿಸದು ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.