ಇಂದು ರಾಜ್ಯ ಬಜೆಟ್; ಮಧ್ಯಾಹ್ನ 12.30ಕ್ಕೆ ಚೊಚ್ಚಲ ಬಜೆಟ್ ಮಂಡಿಸಲಿರುವ ಬೊಮ್ಮಾಯಿ
ಬೆಂಗಳೂರು: ಇಂದು ಮಧ್ಯಾಹ್ನ 12.30ಕ್ಕೆ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ.
ಇದು ಚುನಾವಣಾ ವರ್ಷವಾದ್ದರಿಂದ ಈ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ರಾಜ್ಯ ಬಜೆಟ್ ಮಂಡಿಸುವಾಗಲೂ ಬಜೆಟ್ ಪ್ರತಿಗಳನ್ನು ಇಷ್ಟು ದಿನ ಸೂಟ್‌ಕೇಸ್‌ನಲ್ಲಿ ತರಲಾಗುತ್ತಿತ್ತು. ಆದರೆ ಈ ಬಾರಿ ಫೈಲ್‌ನಲ್ಲಿ ತರಲಾಗುತ್ತದೆ ಎಂದು ತಿಳಿದುಬಂದಿದೆ. ನೀರಾವರಿ, ಕೃಷಿಗೆ ಈ ಬಾರಿ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಆರೋಗ್ಯ, ಶಿಕ್ಷಣ, ಮಹಿಳೆಯರಿಗೂ ಹೆಚ್ಚು ಯೋಜನೆಗಳು ಸಿಗುವ ಸಾಧ್ಯತೆ ಇದೆ.
ಕೊವಿಡ್ ಪಿಡುಗಿನ ಹಿಡಿತಕ್ಕೆ ಸಿಲುಕಿದ್ದ ರಾಜ್ಯದ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿಲ್ಲ. ಕರ್ನಾಟಕ ಸರ್ಕಾರದ ಖಜಾನೆಯು ನಿರೀಕ್ಷಿತ ಪ್ರಮಾಣದಲ್ಲಿ ತುಂಬಿಲ್ಲ ಎಂಬ ಮಾತುಗಳಿವೆ. ಏರಿದ ಹಣದುಬ್ಬರ ಮತ್ತು ಬೆಲೆಏರಿಕೆಯಿಂದ ಕಂಗಾಲಾಗಿರುವ ಜನರು ಸಹ ಬಜೆಟ್ ಮೇಲೆ ನಿರೀಕ್ಷೆಗಳನ್ನು ಬೆಳೆಸಿಕೊಂಡಿದ್ದಾರೆ. ಎಂದಿನಂತೆ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ವಲಯಗಳಿಗೆ ಹೆಚ್ಚಿನ ಮಹತ್ವ ಸಿಗಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಬಜೆಟ್ ಪ್ರಕ್ರಿಯೆ ಶುರುವಾಗಿದ್ದು ಇಲಾಖಾವಾರು ಸಭೆ ನಡೆಸಿದ್ದೇನೆ. ಫೆಬ್ರವರಿ 25ರ ನಂತರ ಎಲ್ಲಾ ಇಲಾಖೆಗಳ ಬೇಡಿಕೆ ಗಮನಿಸಿ ಬಜೆಟ್ ಸಿದ್ಧಪಡಿಸಲಾಗುವುದು. ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆ ಗಮನಿಸಿ ಬಜೆಟ್ ಸಿದ್ಧಪಡಿಸುತ್ತೇನೆ. ಬಜೆಟ್ನಲ್ಲಿ ರೂಪಿಸುವ ಯೋಜನೆಗಳು ಹೇಗಿರುತ್ತೆ ಎಂದು ಮೊದಲೇ ಹೇಳಲು ಆಗುವುದಿಲ್ಲ ಎಂದು ಬೊಮ್ಮಾಯಿ ಈ ಮೊದಲು ಹೇಳಿದ್ದರು.