Bengaluru

ಪೌರ ಕಾರ್ಮಿಕರು ಮಾಡುವ ಕೆಲಸ ನೋಡಿದರೆ ಕಣ್ಣೀರು ಬರುತ್ತೆ; ಸಿಎಂ ಭಾವುಕ

ಬೆಂಗಳೂರು: ಪೌರಕಾರ್ಮಿಕರು ಯಾವ ರೀತಿ ಕೆಲಸ ಮಾಡ್ತಾರೆ ಅಂತಾ ನೋಡಿದ್ರೆ ಕಣ್ಣೀರು ಬರುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾಗಿ ನುಡಿದಿದ್ದಾರೆ. ಪೌರಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಪೌರಕಾರ್ಮಿಕರೊಂದಿಗೆ ಉಪಹಾರ ಸೇವಿಸಿದ ಸಿಎಂ ಅನಂತರ ಮಾಧ್ಯಮಗಳ ಜೊತೆ ಮಾತನಾಡಿದರು.

ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗಾಗಿ ಒಂದು ಸಮಿತಿ ಮಾಡಿದ್ದೇವೆ. 11,133 ಪೌರ ಕಾರ್ಮಿಕರ ಕಾಯಂ ನೇಮಕಾತಿಯನ್ನು ತಕ್ಷಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ 43 ಸಾವಿರ ಪೌರಕಾರ್ಮಿಕರನ್ನೂ ಕಾಯಂ ಮಾಡಲಾಗುವುದು ಎಂದು ಭರವಸೆ ನೀಡಿದರು. ಪೌರಕಾರ್ಮಿಕರ ಪರವಾಗಿ ಸೇವೆ ಮಾಡಲು ಭಗವಂತ ಅವಕಾಶ ಕೊಟ್ಟಿದ್ದಾನೆ. ಈ ವಿಚಾರದಲ್ಲಿ ಯಾರೂ ಗೊಂದಲ ಮಾಡಿಕೊಳ್ಳುವ ಅಗತ್ಯ ಇಲ್ಲ. ನಾನು ಸಿಎಂ ಆಗಿ ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.

ರೇಸ್‌ಕೋರ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ 500ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಉಪಹಾರ ವ್ಯವಸ್ಥೆಯನ್ನು ಸಿಎಂ ಏರ್ಪಡಿಸಿದ್ದರು. ಬೆಳಿಗ್ಗೆ 9.30ಕ್ಕೆ ಸಿಎಂ ಸಹ ಪೌರ ಕಾರ್ಮಿಕರೊಂದಿಗೆ ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿಬಾತ್ ಉಪಹಾರ ಸವಿದರು.

Share Post