BengaluruNationalPolitics

ಬಿಜೆಪಿ ಸೋಲಿಗೆ ಕಾರಣಗಳು ಇವೇ ನೋಡಿ; ಇವು ಬಿಟ್ಟು ಬೇರೇನೂ ಇಲ್ಲ..!

ಬೆಂಗಳೂರು; ಅಮಿತ್‌ ಶಾ ಚುನಾವಣಾ ಚಾಣಕ್ಯ… ಅವರು ಬಂದರೆ ಬಿಜೆಪಿ ಗೆಲ್ಲಿಸುತ್ತಾರೆ… ಪ್ರಧಾನಿ ಮೋದಿಯವರನ್ನು ವಿಶ್ವವೇ ಕೊಂಡಾಡುತ್ತೆ, ಅವರು ಪ್ರಚಾರ ಮಾಡಿದರೆ, ಅವರ ಹೆಸರಲ್ಲಿ ಮತ ಕೇಳಿದರೆ ಬಿಜೆಪಿ ಗೆದ್ದು ಬೀಗುತ್ತೆ… ಹೀಗಂತ ರಾಜ್ಯ ಬಿಜೆಪಿ ನಾಯಕರು ಭಾವಿಸಿದ್ದರು… ಅವರಂದುಕೊಂಡಂತೆಯೇ ಮೋದಿ ಹೆಸರಲ್ಲಿ ಪ್ರಚಾರ ನಡೆಯಿತು. ಅಮಿತ್‌ ಶಾ ಬಂದು ತಂತ್ರಗಾರಿಕೆ ನಡೆಸಿದರು… ಆದ್ರೆ ಕರ್ನಾಟಕದ ಮತದಾರ ಮಾತ್ರ ಇದ್ಯಾವುದಕ್ಕೂ ಮಣೆ ಹಾಕಲಿಲ್ಲ… ಬಿಜೆಪಿಯನ್ನು ಚುನಾವಣೆಯಲ್ಲಿ ಮಕಾಡೆ ಮಲಗಿಸಿದ್ದಾರೆ… ಬಿಜೆಪಿ ಇಷ್ಟು ಇಷ್ಟು ಹೀನಾಯವಾಗಿ ಸೋಲುತ್ತೆ, ಕಾಂಗ್ರೆಸ್‌ಗೆ ಇಷ್ಟು ಪ್ರಚಂಡ ಬಹುಮತ ಸಿಗುತ್ತೆ ಎಂದು ಯಾರೂ ಊಹಿಸಿರಲಿಲ್ಲ… ಆದ್ರೆ, ಅದೆಲ್ಲವೂ ಘಟಿಸಿದೆ… ಈಗ ಇದಕ್ಕೆ ಕಾರಣಗಳನ್ನು ಹುಡುಕುವ ಸಮಯ… ಹಾಗಾದರೆ ಬಿಜೆಪಿ ಸೋಲಿಗೆ ಕಾರಣಗಳೇನು..? ಕಾಂಗ್ರೆಸ್‌ ಗೆಲುವಿಗೆ ಸಿಕ್ಕ ಬಲವೇನು..? ಒಂದೊಂದೇ ನೋಡುತ್ತಾ ಹೋಗೋಣ ಬನ್ನಿ…

ಬಿಜೆಪಿ ಸೋಲಿಗೆ ಕಾರಣ-1;   

ರಾಜ್ಯ ಬಿಜೆಪಿಯನ್ನು ಯಾರು ಮುನ್ನಡೆಸುತ್ತಾರೆ ಎಂಬುದಕ್ಕೆ ಉತ್ತರ ಇಲ್ಲದೆ ಇದ್ದದ್ದು. ಇಡೀ ಚುನಾವಣೆಯಲ್ಲಿ ಮೋದಿಯವರನ್ನು ಮುಂದೆ ತರಲಾಯಿತು. ಮೋದಿ ಮುಖ ನೋಡಿ ಮತ ನೀಡಿ ಎಂದು ಕೇಳಲಾಯಿತು. ಆದ್ರೆ, ಮೋದಿ ಬಂದು ಇಲ್ಲಿ ಅಧಿಕಾರ ನಡೆಸೋದಕ್ಕೆ ಆಗೋದಿಲ್ಲ ಅನ್ನೋದು ಮತದಾರರಿಗೆ ಗೊತ್ತಿತ್ತು… ರಾಜ್ಯದಲ್ಲಿ ಬಿಜೆಪಿಯನ್ನು ಮುನ್ನಡೆಸುವ ನಾಯಕರೇ ಇಲ್ಲದ ಮೇಲೆ, ಮೋದಿ ಮುಖ ನೋಡಿ ಹೇಗೆ ಮತ ಹಾಕೋದು ಅನ್ನೋ ಪ್ರಶ್ನೆ ಮತದಾರರನ್ನು ಬಲವಾಗಿ ಕಾಡಿತ್ತು… ಆಗ ಅವರ ಮುಂದೆ ಬಂದಿದ್ದು ಕಾಂಗ್ರೆಸ್‌ ಪಕ್ಷ…

ಬಿಜೆಪಿ ಸೋಲಿಗೆ ಕಾರಣ-2;

ಭ್ರಷ್ಟಾಚಾರ ಆರೋಪಕ್ಕೆ ಸಮರ್ಥ ಉತ್ತರ ನೀಡದಿದ್ದುದು… ಕಾಂಗ್ರೆಸ್‌ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮೀಷನ್‌ ಆರೋಪ ಮಾಡಿತ್ತು.. ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಪೇಸಿಎಂ ಎಂದು ಲೇವಡಿ ಮಾಡಿತ್ತು… ನಲವತ್ತು ಪರ್ಸೆಂಟ್‌ ಕಮೀಷನ್‌ ಪಡೆಯುತ್ತಿರುವುದಕ್ಕೆ ಕಾಂಗ್ರೆಸ್‌ ಯಾವ ದಾಖಲೆಗಳನ್ನೂ ಕೊಟ್ಟಿರಲಿಲ್ಲ… ಆದ್ರೆ ಗುತ್ತಿಗೆದಾರನ ಆತ್ಮಹತ್ಯೆ ಹಾಗೂ ಗುತ್ತಿಗೆದಾರರ ಸಂಘ ಪ್ರಧಾನಿಗೆ ಬರೆದ ಪತ್ರವನ್ನೇ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್‌ ಸಮರ್ಥವಾಗಿ ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಕಮೀಷನ್‌ ಸರ್ಕಾರ ಎಂದು ಪ್ರಚಾರ ಮಾಡಿತು… ಅದು ಜನರ ಮನಸ್ಸಿನಲ್ಲಿ ನಾಟುವಂತೆ ಮಾಡಿತು.. ಆದ್ರೆ ಬಿಜೆಪಿ ನಾಯಕರು ಇದನ್ನು ಸಮರ್ಥವಾಗಿ ಇದನ್ನು ಅಲ್ಲಗೆಳೆಯಲಿಲ್ಲ.. ಬದಲಾಗಿ ಕಾಂಗ್ರೆಸ್‌ ಭ್ರಷ್ಟಾಚಾರ ಮಾಡಿಲ್ಲವೇ ಎಂದು ಪ್ರಶ್ನಿಸುತ್ತಾ ಬಂದರು… ಪ್ರಧಾನಿ ಮೋದಿಯವರಾದರೂ ಗುತ್ತಿಗೆದಾರರು ಬರೆದ ಪತ್ರಕ್ಕೆ ಪ್ರಚಾರದ ಸಮಯದಲ್ಲಾದರೂ ಉತ್ತರ ಕೊಡಬಹುದಿತ್ತು.. ಅದರ ಬದಲಾಗಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ, 85 ಪರ್ಸೆಂಟ್‌ ಕಮೀಷನ್‌ ಹೊಡೆಯುತ್ತಿತ್ತು ಎಂದು ಹೇಳುತ್ತಾ ಬಂದರು.. ನಾವು 40 ಪರ್ಸೆಂಟ್‌ ಕಮೀಷನ್‌ ಪಡೆದಿಲ್ಲ ಅನ್ನೋದನ್ನು ಹೇಳಲ್ಲಿಲ್ಲ… ಹೀಗಾಗಿ ಜನರ ಮನಸ್ಸಿನಲ್ಲಿ 40 ಪರ್ಸೆಂಟ್‌ ಕಮೀಷನ್‌ ವಿಚಾರ ಬಲವಾಗಿ ಬೇರೂರಿತ್ತು.

ಬಿಜೆಪಿ ಸೋಲಿಗೆ ಕಾರಣ-3;

ನಾಲ್ಕು ವರ್ಷದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಜನಕ್ಕಾಗಿ ಏನು ಮಾಡಿದೆ ಎಂದು ಹೇಳಲೇ ಇಲ್ಲ.. ಡಬಲ್‌ ಎಂಜಿನ್‌ ಸರ್ಕಾರ ಇದ್ದರೆ ರಾಜ್ಯ ಅಭಿವೃದ್ಧಿಯಾಗುತ್ತೆ… ಕರ್ನಾಟಕವನ್ನು ನಾವು ನಂಬರ್‌ ವನ್‌ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಲೇ ಬಂದರು… ಆದ್ರೆ ಜನರ ಮನಸ್ಸಿನಲ್ಲಿ ಬೇರೆಯದೇ ಓಡುತ್ತಿತ್ತು… ಸದ್ಯ ನಾಲ್ಕು ವರ್ಷದಿಂದ ಇರೋದು ಡಬಲ್‌ ಎಂಜಿನ್‌ ಸರ್ಕಾರವೇ… ಆಗ ಏನೂ ಮಾಡಲಿಲ್ಲ… ಬರ ಬಂದಾಗ, ಪ್ರವಾಹ ಬಂದಾಗ ಇದೇ ಪ್ರಧಾನಿ ಮೋದಿ ರಾಜ್ಯದ ಕಡೆ ತಲೆ ಹಾಕಲಿಲ್ಲ… ಈಗ ನೋಡಿದರೆ ಮತ್ತೆ ಅಧಿಕಾರ ಕೊಟ್ಟರೆ ನಂಬರ್‌ ವನ್‌ ಮಾಡುತ್ತೇನೆ ಎನ್ನುತ್ತಿದ್ದಾರೆ… ಇದು ನಂಬೋದಕ್ಕೆ ಆಗೋದಿಲ್ಲ ಎಂದು ಜನ ತೀರ್ಮಾನಿಸಿದ್ದರು…

ಬಿಜೆಪಿ ಸೋಲಿಗೆ ಕಾರಣ-4;

ಕಾಂಗ್ರೆಸ್‌ ಭರವಸೆಗಳನ್ನು ಫಾಲೋ ಮಾಡಲು ಹೋಗಿದ್ದು… ಕಾಂಗ್ರೆಸ್‌ ಉಚಿತ ಗ್ಯಾರೆಂಟಿಗಳನ್ನು ಘೋಷಣೆ ಮಾಡಿದಾಗ, ಇವು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತವೆ… ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ… ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಆರೋಪಿಸುತ್ತಾ ಬಂದರು… ಆದ್ರೆ, ಅವರು ಕೂಡಾ ಉಚಿತ ಸಿಲಿಂಡರ್‌, ಮಹಿಳೆಯರಿಗೆ ಪ್ರತಿ ತಿಂಗಳೂ ಸಹಾಯ ಧನ ಹೀಗೆ ಹಲವು ಉಚಿತ ಘೋಷಣೆ ಮಾಡಿದರು… ಇದು ಜನರಲ್ಲಿ ಕನಫ್ಯೂಷನ್‌ಗೆ ಕಾರಣವಾಯಿತು… ಇನ್ನು ಬಿಜೆಪಿಯವರು ಉಚಿತ ಭರವಸೆಗಳನ್ನು ಘೋಷಣೆ ಮಾಡಿದರೂ, ಅವನ್ನು ನೀಡುತ್ತೇವೆ ಎಂದು ಸಮರ್ಥವಾಗಿ ಜನರ ಮುಂದೆ ಹೇಳಲು ಹೋಗಲಿಲ್ಲ… ಆ ಬಗ್ಗೆ ಹೆಚ್ಚು ಪ್ರಚಾರವನ್ನೂ ಮಾಡಲಿಲ್ಲ… ಹೀಗಾಗಿ ಕಾಂಗ್ರೆಸ್‌ ಭರವಸೆಗಳ ಮುಂದೆ ಬಿಜೆಪಿ ಭರವಸೆಗಳಿಗೆ ಸೋಲಾಯಿತು.

ಬಿಜೆಪಿ ಸೋಲಿಗೆ ಕಾರಣ-5;

ಬಿಜೆಪಿಯವರು ಹೆಚ್ಚು ನಂಬೋದು ಬೂತ್‌ ಮಟ್ಟದ ಕಾರ್ಯಕರ್ತರನ್ನು. ಬೂತ್‌ ಮಟ್ಟದ ಕಾರ್ಯಕರ್ಯರಿಗೆ ಸಮರ್ಥವಾಗಿ ಟ್ರೈನಿಂಗ್‌ ಕೊಡುವ ಬಿಜೆಪಿ ನಾಯಕರು, ಮತದಾನದ ದಿನ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬರುವ ಟಾಸ್ಕ್‌ ನೀಡುತ್ತಾರೆ… ಬೂತ್‌ ಮಟ್ಟದ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮತದಾರರ ಮನವೊಲಿಸಿ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸುತ್ತಾರೆ.. ಹಾಗೆ ಮಾಡುವಾಗ ಬಿಜೆಪಿ ಪರ ಮತಹಾಕುವಂತೆ ಮನವೊಲಿಸುತ್ತಾರೆ… ಇದು ವರ್ಕೌಟ್‌ ಆಗುತ್ತೆ ಎಂದು ಬಿಜೆಪಿಯವರು ನಂಬಿದ್ದರು.. ಆದ್ರೆ, ಬಿಜೆಪಿ ಬೂತ್‌ ಮಟ್ಟದಲ್ಲಿ ತಂತ್ರಗಾರಿಕೆ ನಡೆಸಿದ್ದರೆ, ಈ ಬಾರಿ ಕಾಂಗ್ರೆಸ್‌ನವರು ನೇರವಾಗಿ ಅಡುಗೆ ಮನೆಗೆ ನುಗ್ಗಿದ್ದರು… ಕಾಂಗ್ರೆಸ್‌ ಗೆ ಮತಹಾಕಬೇಕು ಎಂಬ ತೀರ್ಮಾನ ಈ ಬಾರಿ ಅಡುಗೆ ಮನೆಗಳಲ್ಲೇ ಆಗಿರೋದು…

ಮನೆಯ ಒಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ, ಮನೆಯ ವಿದ್ಯುತ್‌ ಫ್ರೀ, 10 ಕೆಜಿ ಉಚಿತ ಅಕ್ಕಿ, ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ ಹೀಗೆ ಹತ್ತು ಹಲವು ಭರವಸೆಗಳನ್ನು ಕಾಂಗ್ರೆಸ್‌ ನೀಡಿದೆ. ಇದೆಲ್ಲವೂ ಮಹಿಳೆಯರಿಗೆ ಉಪಯೋಗವಾಗುತ್ತದೆ.. ಈ ವಿಚಾರಗಳು ಅಡುಗೆ ಮನೆಗಳಲ್ಲಿ ಚರ್ಚೆಗಳಾಗಿವೆ… ಹೀಗಾಗಿ ಬೂತ್‌ ಮಟ್ಟದ ತಂತ್ರಗಾರಿಕೆಗಿಂತ, ಅಡುಗೆ ಮನೆಯ ತಂತ್ರಗಾರಿಕೆ ಈ ಬಾರಿ ಚೆನ್ನಾಗಿ ವರ್ಕೌಟ್‌ ಆಗಿವೆ..

ಬಿಜೆಪಿ ಸೋಲಿಗೆ ಕಾರಣ-6;

ಲಿಂಗಾಯತ ಹಿರಿಯ ನಾಯಕರನ್ನು ಕಡೆಗಣಿಸಿದ್ದು, ಜೊತೆಜೊತೆಗೆ ಒಕ್ಕಲಿಗರನ್ನು ಒಲಿಸಿಕೊಳ್ಳಲು ಪ್ರಯತ್ನ ಮಾಡಿದ್ದು… ಈ ಬಾರಿ ಬಿಜೆಪಿ ನಾಯಕರು ಒಕ್ಕಲಿಗ ಮತಗಳ ಮೇಲೆ ಹೆಚ್ಚು ಕಣ್ಣಿಟ್ಟಿದ್ದರು.. ಹೇಗಿದ್ದರೂ ಲಿಂಗಾಯತರು ಬಿಜೆಪಿಗೆ ಮತ ಹಾಕುತ್ತಾರೆ… ಒಕ್ಕಲಿಗರನ್ನೂ ಒಲಿಸಿಕೊಂಡರೆ ಕರ್ನಾಟಕದಲ್ಲಿ ನಮ್ಮ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕೋರು ಯಾರೂ ಇಲ್ಲ ಎಂದು ಬಿಜೆಪಿ ನಾಯಕರು ಭಾವಿಸಿದ್ದರು.. ಹೀಗಾಗಿ ಮಂಡ್ಯ, ರಾಮನಗರ ಮೈಸೂರಿನ ಕಡೆ ಹೆಚ್ಚು ಆಸಕ್ತಿ ತೋರಿಸಿದರು… ಇದೇ ವೇಳೆ ಮತ್ತದೇ ಹಿಂದುತ್ವದ ಭಾವನಾತ್ಮಕ ವಿಚಾರಗಳನ್ನು ಮುಂದೆ ತಂದರು.. ಉರಿಗೌಡ, ನಂಜೇಗೌಡ ಹೆಸರುಗಳು ಮುನ್ನೆಲೆಗೆ ತಂದು ಒಕ್ಕಲಿಗರ ಮತ ಪಡೆಯಲು ಪ್ರಯತ್ನಿಸಿದರು… ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಮೂರ್ತಿ ಸ್ಥಾಪನೆ ಮಾಡಿದ್ದು, ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡ್ತೀವಿ ಎಂದಿದ್ದು, ಮಾಗಡಿಯಲ್ಲಿ ಕೆಂಪೇಗೌಡ ಜನ್ಮಸ್ಥಳದ ಅಭಿವೃದ್ಧಿ ಮಾಡ್ತೀವಿ ಎಂದಿದ್ದು ಇವೆಲ್ಲಾ ಭಾನವಾತ್ಮಕ ವಿಚಾರಗಳೇ… ಆದ್ರೆ, ಹಳೇ ಮೈಸೂರು ಭಾಗದ ಜನ ಯಾವತ್ತೂ ಭಾವೆನಾತ್ಮಕ ವಿಚಾರಗಳಿಗೆ ಬೆಲೆ ಕೊಡೋದಿಲ್ಲ… ಅದರಲ್ಲೂ ದ್ವೇಷ ಬಿತ್ತುವ ವಿಷಯಗಳಿಗೆ ಸೊಪ್ಪು ಹಾಕಲ್ಲ…

ಇನ್ನು ಇದೇ ವೇಳೆ ಲಿಂಗಾಯತ ಪ್ರಮುಖ ನಾಯಕರನ್ನು ಕಡೆಗಣಿಸಲಾಯಿತು… ವಯಸ್ಸಿನ ಹಿನ್ನೆಲೆಯಲ್ಲಿ ಲಿಂಗಾಯತ ಹಿರಿಯ ನಾಯಕರಿಗೆ ಟಿಕೆಟ್‌ ತಪ್ಪಿಸಲಾಯಿತು… ಜೊತೆಗೆ ಯಡಿಯೂರಪ್ಪರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದು ಕೂಡಾ ಲಿಂಗಾಯತರಲ್ಲಿ ಅಸಮಾಧಾನ ಇದ್ದೇ ಇತ್ತು… ಬೊಮ್ಮಾಯಿ ಲಿಂಗಾಯತರೇ ಆಗಿದ್ದರೂ, ಲಿಂಗಾಯತರೆಲ್ಲರೂ ಒಪ್ಪಿಕೊಂಡಿರೋದು ಯಡಿಯೂರಪ್ಪರನ್ನು ಮಾತ್ರ… ಹೀಗಾಗಿ, ಲಿಂಗಾಯತರು ಒಳಗೊಳಗೇ ತಿರುಗಿಬಿದ್ದರು…

ಬಿಜೆಪಿ ಸೋಲಿಗೆ ಕಾರಣ-6;

ಭಜರಂಗದಳ ನಿಷೇಧ ವಿಚಾರದಲ್ಲಿ ಕೊನೆಯ ನಾಲ್ಕೈದು ದಿನಗಳು ಕಾಲ ಕಳೆದಿದ್ದು… ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸಮಾಜದ ಶಾಂತಿ ಕದಡುವ ಯಾವುದೇ ಸಂಸ್ಥೆಯನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿತ್ತು.. ಅದು ಪಿಎಫ್‌ಐ ಆಗಿರಬಹುದು, ಬಜರಂಗದಳವಾಗಿರಬಹುದು ಎಂದು ಉದಾಹರಣೆ ಕೊಟ್ಟಿತ್ತು… ಬಿಜೆಪಿಯವರು ಕಾಂಗ್ರೆಸ್‌ ಬಜರಂಗದಳವನ್ನು ನಿಷೇಧ ಮಾಡಲು ಹೊರಟಿದೆ.. ಇದು ಹಿಂದೂಗಳಿಗೆ ಮಾಡುವ ಅವಮಾನ ಎಂದು ಬೊಬ್ಬೆ ಹೊಡೆಯೋದಕ್ಕೆ ಶುರು ಮಾಡಿತು… ಮೋದಿಯವರು ಹೋದಲ್ಲೆಲ್ಲಾ ಜನರ ಕೈಯಿಂದ ಜೈಜೈ ಬಜರಂಗಿ ಎಂದು ಕೂಗಿಸಿದರು… ಬಜರಂಗದಳ ನಿಷೇಧ ಮಾಡೋದು ನೇರವಾಗಿ ಆಂಜನೇಯನಿಗೇ ಮಾಡುವ ಅವಮಾನ ಎಂದು ಹೇಳಲಾಯಿತು. ಕಡೆಯ ನಾಲ್ಕೈದು ದಿನ ಬಿಜೆಪಿ ನಾಯಕರು ಇದೇ ವಿಷಯವನ್ನು ಹೇಳುತ್ತಲೇ ಕಾಲ ಕಳೆದರು…

ಆದ್ರೆ, ಹಿಂದುತ್ವ ಹಾಗೂ ಧರ್ಮ ಆಧಾರಿತ ಭಾವನಾತ್ಮಕ ವಿಚಾರಗಳು ಕರ್ನಾಟಕದ ಜನಕ್ಕೆ ಯಾವತ್ತೂ ಕನೆಕ್ಟ್‌ ಆಗುವುದಿಲ್ಲ… ಕರಾವಳಿ ಪ್ರದೇಶದ ಜನರು ಮಾತ್ರ ಈ ವಿಚಾರಗಳನ್ನು ಹೆಚ್ಚು ಮಾತನಾಡುತ್ತಾರೆ… ಆದ್ರೆ ಕರ್ನಾಟಕದ ಬಹುತೇಕ ಭಾಗದ ಜನಕ್ಕೆ ಇಂತಹ ಧರ್ಮದ ವಿಚಾರಗಳು ಬೇಕಾಗಿಯೇ ಇಲ್ಲ… ಅಷ್ಟೇ ಏಕೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಹುಪಾಲು ಜನಕ್ಕೆ ಬಜರಂಗ ದಳ ಸಂಘಟನೆ ಅಂದರೆ ಏನು..? ಅದು ಏನು ಮಾಡುತ್ತೆ ಅನ್ನೋದೇ ಗೊತ್ತಿಲ್ಲ… ಹೀಗಾಗಿ ಈ ವಿಚಾರ ಜನರಿಗೆ ಕನೆಕ್ಟ್‌ ಆಗಲೇ ಇಲ್ಲ… ಕನೆಕ್ಟ್‌ ಆಗುವ ಕರಾವಳಿ ಭಾಗದಲ್ಲಿ ನಮಗೆ ಮತ ಬರೋಲ್ಲ ಅಂತ ಕಾಂಗ್ರೆಸ್‌ನವರು ತೀರ್ಮಾನಿಸಿದ್ದರು.. ಹೀಗಾಗಿ ಬಿಜೆಪಿಯವರು ಅದೇ ವಿಚಾರ ಮಾತನಾಡಲಿ, ನಾವು ಬೇರೆಯದನ್ನು ಜನಕ್ಕೆ ಹೇಳೋಕೆ ಹೊರಟರು.

ಬಿಜೆಪಿಯವರು ಬಜರಂಗದಳವನ್ನು ನಿಷೇಧ ಮಾಡುವುದೇ ಹಿಂದುತ್ವಕ್ಕೆ ಮಾಡುವ ಅಪಮಾನ, ಆಂಜನೇಯನಿಗೆ ಮಾಡುವ ಅಪಮಾನ ಎನ್ನುತ್ತಿದ್ದರೆ, ಅದಕ್ಕೆ ಕಾಂಗ್ರೆಸ್‌ನವರು ಅದಕ್ಕೆ ತಕ್ಕ ಟಾಂಗ್‌ ಕೊಡುತ್ತಾ ಬಂದರು.. ದೇವರ ಹೆಸರಿಟ್ಟುಕೊಂಡವರು ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ವಿಧಿಸಿದರೆ ದೇವರಿಗೆ ಹೇಗೆ ಅವಮಾನ ಆಗುತ್ತದೆ ಎಂದು ಪ್ರಶ್ನಿಸಿದರು… ಜೊತೆಗೆ ನೀವೊಬ್ಬರೇ ಹಿಂದೂಗಳಲ್ಲ, ನೀವೊಬ್ಬರೇ ಹನುಮನ ಭಕ್ತರಲ್ಲ ಎಂದು ಸಾರಿ ಸಾರಿ ಹೇಳಿದರು… ಡಿ.ಕೆ.ಶಿವಕುಮಾರ್‌ ಅವರಂತೂ ನಾನೂ ಹನುಮ ಭಕ್ತ ಎಂದರು.. ಹನುಮನ ದೇಗುಲಗಳಿಗೆ ಭೇಟಿ ಕೊಟ್ಟರು.. ನಮ್ಮ ಸರ್ಕಾರ ಬಂದರೆ ಹನುಮಂತನ ದೇವಸ್ಥಾನಗಳನ್ನು ಕಟ್ಟಿಸುತ್ತೇನೆ ಎಂದರು.. ಹನುಮ ಹುಟ್ಟಿದ ಸ್ಥಳದ ಅಭಿವೃದ್ಧಿಗೆ ಮಂಡಳಿ ಸ್ಥಾಪನೆ ಮಾಡುತ್ತೇನ ಎಂದರು… ಇದು ಜನರಿಗೆ ಕನೆಕ್ಟ್‌ ಆಗಿತ್ತು…

ಬಿಜೆಪಿ ಸೋಲಿಗೆ ಕಾರಣ-7;

ಪ್ರಧಾನಿ ಮೋದಿಯವರು ವಿಶಾಲ ರಸ್ತೆಗಳಲ್ಲಿ ರೋಡ್‌ ಶೋಗಳನ್ನು ಮಾಡುತ್ತಾ ಹೋಗುತ್ತಿದ್ದರೆ, ಇತ್ತ ಕಾಂಗ್ರೆಸ್‌ನ ನಾಯಕರು ಸಾಮಾನ್ಯ ಜನರ ಬಳಿಗೆ ಹೋಗುತ್ತಿದ್ದರು… ರಾಹುಲ್‌ ಗಾಂಧಿ, ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಫುಡ್‌ ಡೆಲಿವರಿ ಬಾಯ್‌ಗಳ ಜೊತೆ ಸಂವಾದ ನಡೆಸಿದ್ದು, ಅವರ ಜೊತೆ ಊಟ ಮಾಡಿದ್ದು, ಹೀಗೆ ಸಾಮಾನ್ಯರ ಜೊತೆ ಕನೆಕ್ಟ್‌ ಆಗುತ್ತಾ ಹೋದರು… ಆಗ ಜನ ಸಾಮಾನ್ಯರು ಕಾಂಗ್ರೆಸ್‌ ಪಕ್ಷವೇ ಮೇಲು ಎಂಬ ತೀರ್ಮಾನಕ್ಕೆ ಬಂದರು.

ಬಿಜೆಪಿ ಸೋಲಿಗೆ ಕಾರಣ-8;

ಸಿದ್ದರಾಮಯ್ಯ ಸರ್ಕಾರ ಇದ್ದಾಗ ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಗಳಲ್ಲಿ ಶೇ.99ರಷ್ಟು ಈಡೇರಿಸಿದ್ದೇವೆ ಎಂದು ಕಾಂಗ್ರೆಸ್‌ ಪಟ್ಟಿ ಕೊಡುತ್ತಲೇ ಬಂದಿತ್ತು… ನಾವು ಆಗ ಹೇಳಿದ್ದನ್ನು ಮಾಡಿದ್ದೇವೆ… ಈಗ ಕೂಡಾ ಹೇಳೋದನ್ನು ಮಾಡುತ್ತೇವೆ ಎಂದು ಜನರಿಗೆ ಮನವರಿಕ ಮಾಡಿಕೊಡುತ್ತಿತ್ತು… ಆದ್ರೆ ಬಿಜೆಪಿಯವರು ಆರುನೂರಕ್ಕೂ ಹೆಚ್ಚು ಭರವಸೆಗಳನ್ನು ಕಳೆದ ಚುನಾವಣೆಯಲ್ಲಿ ನೀಡಿದ್ದರು.. ಆದ್ರೆ ಅದರಲ್ಲಿ ಹತ್ತು ಪರ್ಸೆಂಟ್‌ ಭರವಸೆಗಳನ್ನು ಕೂಡಾ ಈಡೇರಿಸಲಿಲ್ಲ ಎಂದು ಕಾಂಗ್ರೆಸ್‌ ಆರೋಪಿಸುತ್ತಿತ್ತು… ಆದ್ರೆ ಬಿಜೆಪಿ ಇದಕ್ಕೆ ಉತ್ತರವೇ ಕೊಡಲಿಲ್ಲ… ನಾವು ಇಂತಹ ಭರವಸೆಗಳನ್ನು ಕೊಟ್ಟಿದ್ದೆವು, ಅದರಲ್ಲಿ ಇಂತಹವನ್ನು ಈಡೇರಿಸಿದ್ದೇವೆ ಎಂದು ಬಿಜೆಪಿ ಹೇಳಲೇ ಇಲ್ಲ… ಹೀಗಾಗಿ ಜನ ಬಿಜೆಪಿ ಏನನ್ನೂ ಮಾಡಿಲ್ಲ ಎಂದು ತೀರ್ಮಾನಿಸಿಬಿಟ್ಟರು… ಇದು ಕಾಂಗ್ರೆಸ್‌ಗೆ ಅನುಕೂಲವಾಯಿತು.

Share Post