Bengaluru

ಸಂತೋಷ್‌ ಆತ್ಮಹತ್ಯೆ ಹಿನ್ನೆಲೆ; ನಾಳೆ ಮಧ್ಯಾಹ್ನ ಈಶ್ವರಪ್ಪ ರಾಜೀನಾಮೆ

ಬೆಂಗಳೂರು: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ತಲೆದಂಡ ಖಚಿತವಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ಹೈಕಮಾಂಡ್‌ ಈಶ್ವರಪ್ಪ ಅವರಿಗೆ ಹೇಳಿದೆ ಎಂದು ತಿಳಿದುಬಂದಿದೆ. ನಾಳೆ ಮಧ್ಯಾಹ್ನ ಈಶ್ವರಪ್ಪ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ರಸ್ತೆ ಕಾಮಗಾರಿಗೆ ಬಿಲ್‌ ಪಾವತಿ ಮಾಡಲು ನಲವತ್ತು ಪರ್ಸೆಂಟ್‌ ಕಮೀಷನ್‌ ಕೇಳುತ್ತಿದ್ದಾರೆ ಎಂದು ಸಂತೋಷ್‌ ಪಾಟೀಲ್‌ ಆರೋಪ ಮಾಡಿದ್ದರು. ಜೊತೆಗೆ ಆತ್ಮಹತ್ಯೆಗೂ ಮುನ್ನ ಮಾಧ್ಯಮಗಳಿಗೆ ವಾಟ್ಸ್‌ ಆಪ್‌ ಸಂದೇಶ ಕಳುಹಿಸಿದ್ದು, ನನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸಚಿವ ಈಶ್ವರಪ್ಪ ಅವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿದ್ದಾರೆ.

ಇನ್ನು ಬಿಜೆಪಿ ಹೈಕಮಾಂಡ್‌ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಕರೆ ಮಾಡಿ ಮಾತನಾಡಿರುವ ಹೈಕಮಾಂಡ್‌ ನಾಯಕರು, ಪ್ರಕರಣದ ಸಂಪೂರ್ಣ ವಿವರ ಪಡೆದುಕೊಂಡಿದ್ದಾರೆ. ಅನಂತರ ಈಶ್ವರಪ್ಪ ಅವರಿಗೆ ಕರೆ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಈಶ್ವರಪ್ಪ ನಾಳೆ ಮಧ್ಯಾಹ್ನ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

 

Share Post