ಸಂತೋಷ್ ಆತ್ಮಹತ್ಯೆ ಪ್ರಕರಣ; ರಾಜ್ಯಪಾಲರಿಗೆ ದೂರು ಸಲ್ಲಿಸಿದ ಕಾಂಗ್ರೆಸ್
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಯೋಗ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್‌ಗೆ ಮನವಿ ಪತ್ರ ಸಲ್ಲಿಸಿದೆ. ನಲವತ್ತು ಪರ್ಸೆಂಟ್ ಕಮೀಷನ್‌ಗಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಕಾರಣರಾಗಿರುವ ಸಚಿವ ಈಶ್ವರಪ್ಪ ಅವರನ್ನು ವಜಾಗೊಳಿಸಿ, ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಭ್ರಷ್ಟಾಚಾರ ಪ್ರಕರಣ ದಾಖಲಿಸಿ, ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಕಾಂಗ್ರೆಸ್ ಮನವಿ ಸಲ್ಲಿಸಿದೆ.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಈ ಪ್ರಕರಣ ಕಪ್ಪುಚುಕ್ಕೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೊದಲಿಂದಲೂ ಉತ್ತಮ ಆಡಳಿತ ನೀಡುತ್ತಾ ಬಂದಿದೆ. ಆದರೆ ಈಗ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರ ವಿರುದ್ಧ ಗುತ್ತಿಗೆದಾರರ ಸಂಘ ಧ್ವನಿ ಎತ್ತಿದೆ. ಇದಕ್ಕೆ ಬಿಜೆಪಿ, ಹಿಂದೂವಾಹಿನಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಚಿವ ಈಶ್ವರಪ್ಪ ಭ್ರಷ್ಟಾಚಾರದ ಬಗ್ಗೆ ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ನಾಯಕರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ಸಾಕ್ಷಿಯಾಗಿದೆ ಎಂದರು.
ಈಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡು ತನ್ನ ಸಾವಿಗೆ ಸಚಿವರೇ ಕಾರಣ ಎಂದು ಬರೆದಿಟ್ಟಿದ್ದಾರೆ. ರಾಜ್ಯದಲ್ಲಿ ಗುತ್ತಿಗೆದಾರರಿಂದ 40% ಕಮಿಷನ್ ಗಾಗಿ ಸರ್ಕಾರದ ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳು ಆಗ್ರಹಿಸುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ದರು. ಈ ವಿಚಾರ ಬಹಿರಂಗ ಪಡಿಸಲು 40% ಕಮಿಷನ್ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗಬೇಕು ಎಂದು ಅಧಿವೇಶನದಲ್ಲಿ ಗೊತ್ತುವಳಿ ಮಂಡನೆ ಮಾಡಿದರೂ ಚರ್ಚೆಗೆ ಅವಕಾಶ ನೀಡದೆ ವಜಾಗೊಳಿಸಿದರು. ಬಹುಶಃ ಆ ಚರ್ಚೆ ಆಗಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ, ಸಂತೋಷ್ ಪಾಟೀಲ್ ಆತ್ಮಹತ್ಯೆ ಆಗುತ್ತಿರಲಿಲ್ಲ ಎಂದು ಭಾವಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬ ಸದಸ್ಯರು ಹಾಗೂ ಅವರ ಪತ್ನಿಯ ನೋವನ್ನು ಎಲ್ಲರೂ ನೋಡುತ್ತಿದ್ದೀರಿ. ಸಂತೋಷ್ ಬಿಜೆಪಿಯ ವರಿಷ್ಠರನ್ನು ಭೇಟಿ ಮಾಡಲು ಉಡುಪಿಗೆ ಹೋಗಿದ್ದ ಎಂದು ಮಾಧ್ಯಮಗಳಲ್ಲಿ ವರದಿ ಬಂದಿವೆ. ಆದರೆ ಯಾರಿಂದಲೂ ಸ್ಪಂದನೆ ಇಲ್ಲದ ಕಾರಣಕ್ಕೆ ಆತ ನೊಂದು ಭ್ರಷ್ಟಾಚಾರಕ್ಕೆ ಕಾರಣರಾದ ಸಚಿವರ ಹೆಸರು ಬರೆದು ಸಾವಿಗೆ ಶರಣಾಗಿದ್ದಾನೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಹೇಳಿದ್ದಾರೆ.