ನಾಯಕರ ಮನವೊಲಿಕೆಗೆ ಕಣಿದ ಬಂಡಾಯ ಅಭ್ಯರ್ಥಿಗಳು; ನಾಮಪತ್ರ ವಾಪಸ್
ಬೆಂಗಳೂರು; ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಟಿಕೆಟ್ ಸಿಗದಿದ್ದಕ್ಕೆ ಕೆಲವರು ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದರು. ಆಯಾ ಪಕ್ಷದ ಹಿರಿಯರು ಕೆಲವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಹಲವರು ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಅವರು ಯಾರ್ಯರು ಇಲ್ಲಿದೆ ಮಾಹಿತಿ.
ನಾಮಪತ್ರ ಹಿಂಪಡೆದವರು;
೧. ಗಂಗಾಧರ್ ಭಟ್
ಕಾರವಾರ-ಅಂಕೋಲಾ ಕ್ಷೇತ್ರದಿಂದ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಗಂಗಾಧರ್ ಭಟ್ ನಾಮಪತ್ರ ಸಲ್ಲಿಸಿದ್ದರು. ಆದ್ರೆ ಹಾಲಿ ಅಭ್ಯರ್ಥಿ, ಶಾಸಕಿ ರೂಪಾಲಿ ನಾಯ್ಕ ಮನೆಗೆ ಬಂದು ಮನವಿ ಮಾಡಿದ್ದರಿಂದಾಗಿ ನಾಮಪತ್ರ ಹಿಂಪಡೆದಿದ್ದೇನೆ ಎಂದು ಗಂಗಾಧರ್ ಭಟ್ ಹೇಳಿದ್ದಾರೆ.
೨. ಗಂಗಾಂಬಿಕೆ ಮಲ್ಲಿಕಾರ್ಜುನ್
ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಚಿಕ್ಕಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದ್ರೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಹೀಗಾಗಿ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದ್ರೆ ಇಂದು ಬೆಳಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದ್ದರು. ಇದರಿಂದಾಗಿ ಗಂಗಾಂಬಿಕೆ ನಾಮಪತ್ರ ವಾಪಸ್ ಪಡೆದಿದ್ದಾರೆ.
೩. ಮಹಾದೇವಪ್ಪ ಯಾದವಾಡ
ಬೆಳಗಾವಿ ಜಿಲ್ಲೆ ರಾಮದುರ್ಗದ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಈ ಬಾರಿ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದ್ರೆ ಪಕ್ಷದ ವರಿಷ್ಠರ ಮನವೊಲಿಕೆ ನಂತರ ಅವರು ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದಾರೆ.
೪. ರಾಮಣ್ಣ ಲಮಾಣಿ
ಗದಗ ಜಿಲ್ಲೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ರಾಮಣ್ಣ ಲಮಾಣಿಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ. ಹೀಗಾಗಿ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದ್ರೆ ಯಡಿಯೂರಪ್ಪ ಅವರು ದೂರವಾಣಿ ಮೂಲಕ ಮಾತನಾಡಿ, ರಾಮಣ್ಣ ಲಮಾಣಿ ಅವರ ಜೊತೆ ಮಾತನಾಡಿದ್ದಾರೆ. ಇದಾದ ಮೇಲೆ ರಾಮಣ್ಣ ಲಮಾಣಿ ಅವರು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಭೀಮಸಿಂಗ್ ರಾಠೋಡ, ಗುರುನಾಥ ದಾನಪ್ಪನವರ ಕೂಡ ನಾಮಪತ್ರ ವಾಪಸ್ ಪಡೆದಿದ್ದಾರೆ.
೫. ಶಿವಾಚಾರ್ಯ ಸ್ವಾಮೀಜಿ
ತೇರದಾಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ ನೇಕಾರ ಕುರುಹಿನಶೆಟ್ಟಿ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಲಾಗಿತ್ತು. ಆದ್ರೆ ಈ ಸಮುದಾಯಕ್ಕೆ ಟಿಕೆಟ್ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ನೇಕಾರ ಕುರುಹಿನಶೆಟ್ಟಿ ಪೀಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಹಲವರ ಒತ್ತಡದಿಂದಾಗಿ ಸ್ವಾಮೀಜಿಗಳು ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದಾರೆ.
೬. ಅಲ್ತಾಫ್ ಕುಂಪಲ
ಉಳ್ಳಾಲದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ನ ಕೆಲವರು ನನಗೆ ಬೆದರಿಕೆ ಹಾಕಿದ್ದರಿಂದಾಗಿ ಭಯದಿಂದ ನಾಮಪತ್ರ ವಾಪಸ್ ಪಡೆದಿದ್ದೇನೆ. ಈ ಬಗ್ಗೆ ಕ್ರಮಕ್ಕಾಗಿ ದೂರು ನೀಡಿದ್ದೇನೆ ಎಂದು ಅವರು ಆರೋಪಿಸಿದ್ದಾರೆ.
೭. ಕೆಜಿಎಫ್ ಬಾಬು ಪತ್ನಿ
ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕೆಜಿಎಫ್ ಬಾಬು ಹಾಗೂ ಅವರ ಪತ್ನಿ ಇಬ್ಬರೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಇಂದು ಕೆಜಿಎಫ್ ಬಾಬು ಪತ್ನಿ ನಾಮಪತ್ರ ವಾಪಸ್ ಪಡೆದಿದ್ದು, ಕೆಜಿಎಫ್ ಬಾಬು ಹಾಗೆ ಕಣದಲ್ಲಿ ಉಳಿದುಕೊಂಡಿದ್ದಾರೆ.