ರವಿ ಡಿ.ಚೆನ್ನಣ್ಣನವರ್ ಸೇರಿ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು; ಸಿಐಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ಸೇರಿ ಒಂಬತ್ತು ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರವಿ ಡಿ.ಚೆನ್ನಣ್ಣನವರ್ ಸೇರಿ ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪವೊಂದು ಕೇಳಿಬಂದಿತ್ತು. ಈ ಬೆನ್ನಲ್ಲೇ ರವಿ ಡಿ.ಚೆನ್ನಣ್ಣನವರ್‌ಗೆ ಉತ್ತಮ ಹುದ್ದೆ ಸಿಕ್ಕಿದೆ. ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಎಂಡಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಇನ್ನು ಐಪಿಎಸ್ ಅಧಿಕಾರಿ ಭಿಮಾ ಶಂಕರ್ ಗುಳೇದ್ ಅವರನ್ನು ಪೂರ್ವ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ. ಇನ್ನು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಎಸ್‌ಪಿ ಆಗಿದ್ದ ಅಬ್ದುಲ್ ಅಹಾದ್ ಅವರು ಈಗ ಕೆಎಸ್‌ಆರ್‌ಟಿಸಿ ಭದ್ರತೆ ಮತ್ತು ಜಾಗೃತಿ ವಿಭಾಗಕ್ಕೆ ವರ್ಗಾವಣೆಯಾಗಿದ್ದಾರೆ. ಇತ್ತ ಕೊಪ್ಪಳ ಎಸ್‌ಪಿಯಾಗಿದ್ದ ಟಿ.ಸುಧೀರ್ ಈಗ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್‌ಪಿ ಹುದ್ದೆಗೆ ವರ್ಗವಾಗಿದ್ದಾರೆ.
ಕಾರಾಗೃಹ ಇಲಾಖೆಯ ಎಸ್ಪಿ ಟಿ.ಪಿ. ಶಿವಕುಮಾರ್ ಅವರನ್ನು ಚಾಮರಾಜ ನಗರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ದಿವ್ಯ ಸಾರಾ ಥಾಮಸ್ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ. ಇತ್ತ ಡೆಕ್ಕ ಕಿಶೋರ್ ಬಾಬು ಬೀದರ್ ಎಸ್ಪಿಯಾಗಿ ನೇಮಕವಾಗಿದ್ದರೆ, ಎ. ಗಿರಿ ಅವರನ್ನು ಕೊಪ್ಪಳದ ಎಸ್ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಬೀದರ್ ಎಸ್ಪಿಯಾಗಿದ್ದ ನಾಗೇಶ್ ಅವರನ್ನು ಸಿಐಡಿಗೆ ವರ್ಗಾಯಿಸಲಾಗಿದೆ.