ರಾಜ್ಯಸಭಾ ಚುನಾವಣೆ; ಜೆಡಿಎಸ್ ಅಭ್ಯರ್ಥಿಯನ್ನು ನಿವೃತ್ತಗೊಳಿಸಲಿ; ಸಿದ್ದರಾಮಯ್ಯ ಮನವಿ
ಬೆಂಗಳೂರು; ನಾಳೆ ರಾಜ್ಯ ವಿಧಾಸಭೆಯಿಂದ ಆಯ್ಕೆಯಾಗುವ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್‌ನ ಒಬ್ಬರು ಗೆಲ್ಲೋದು ಪಕ್ಕಾ ಆಗಿದೆ. ಆದ್ರೆ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ನಾಲ್ಕನೇ ಸ್ಥಾನಕ್ಕಾಗಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದು, ಮೂವರಿಗೂ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಷ್ಟು ಮತಗಳು ಇಲ್ಲ. ಹೀಗಾಗಿ, 32 ಶಾಸಕರ ಬಲ ಹೊಂದಿರುವ ಜೆಡಿಎಸ್, 25 ಹೆಚ್ಚುವರಿ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಬೆಂಬಲಕ್ಕಾಗಿ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಆದ್ರೆ ರಾಜ್ಯ ಕಾಂಗ್ರೆಸ್ ನಾಯಕರು ಇದಕ್ಕೆ ಒಪ್ಪಿತ್ತಿಲ್ಲ. ಜೆಡಿಎಸ್ ಶಾಸಕರೇ ನಮಗೆ ಬೆಂಬಲ ನೀಡಲಿ ಎಂದು ಹೇಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಗೊಳಿಸಲಿ. ಜೆಡಿಎಸ್ ಶಾಸಕರೆಲ್ಲಾ ನಮ್ಮ ಅಭ್ಯರ್ಥಿಗೆ ಮತ ನೀಡಲಿ ಎಂದು ಮನವಿ ಮಾಡಿದ್ದಾರೆ. ಈ ಹಿಂದೆ ನಾವು ದೇವೇಗೌಡರನ್ನು ಬೆಂಬಲಿಸಿದ್ದೆವು. ಹೀಗಾಗಿ ಈಗ ನಮ್ಮ ಅಭ್ಯರ್ಥಿಗೆ ಮತ ನೀಡಲಿ ಎಂದು ಮನವಿ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಇದೇ ಮಾತನ್ನೇ ಹೇಳಿದ್ದಾರೆ. ಹೀಗಾಗಿ ನಾಲ್ಕನೇ ಅಭ್ಯರ್ಥಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.