ಪಿಎಸ್‌ಐ ನೇಮಕಾತಿ ಹಗರಣ; ಎಫ್‌ಐಆರ್ ಹಾಕಲು ಮೂರು ದಿನಗಳೇಕೆ..?; ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆ
ಬೆಂಗಳೂರು; ಪಿಎಸ್‌ಐ ನೇಮಕಾತಿ ಹಗರಣದ ಆರೋಪಿಗಳ ವಿರುದ್ಧ ಎಫ್‌ಐಆರ್ ಹಾಕಲು ಮೂರು ದಿನ ತೆಗೆದುಕೊಂಡಿದ್ದೇಕೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿಐಡಿ ಅಧಿಕಾರಿಗಳು ದಾಖಲೆಗಾಗಿ ನೋಟಿಸ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.
ನಾನು ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದೆ. ಈಗ ದಾಖಲೆ ನೀಡುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಾನು ಕೇಸ್‌ನ ಆರೋಪಿಯೂ ಅಲ್ಲ, ಸಾಕ್ಷಿಯೂ ಅಲ್ಲ. ಆದರೂ ನೋಟಿಸ್ ನೀಡಿದ್ದಾರೆ. ನೋಟಿಸ್ ನೀಡುವ ಮುನ್ನ ಕಾಮನ್‌ಸೆನ್ಸ್ ಯೂಸ್ ಮಾಡಿ ಎಂದು ಸಲಹೆ ನೀಡಿದ್ದಾರೆ. ಪ್ರಕರಣದ ಆರೋಪಿ ದಿವ್ಯಾ ಮನೆಗೆ ರಾಜ್ಯ ಗೃಹ ಸಚಿವರು ಭೇಟಿ ನೀಡಿದ್ದರು. ಹೀಗಾಗಿ ನೀವು ಅವರಿಗೆ ನೋಟಿಸ್ ನೀಡಬೇಕಾಗಿತ್ತು. ಯಾಕೆ ನೀಡಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ನಾನು ಅಕ್ರಮ ಬಯಲಿಗೆಳೆಯುವುದಕ್ಕಾಗಿ ಹಲವು ಸುದ್ದಿಗೋಷ್ಠಿಗಳನ್ನು ನಡೆಸಿದ್ದೆ. ಇದರ ನಂತರ ನನ್ನ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿತ್ತು. ಅದಲ್ಲದೆ ಅಂತಾರಾಷ್ಟ್ರೀಯ ಕರೆಯೊಂದರ ಮೂಲಕ ನನಗೆ ಬೆದರಿಕೆ ಕರೆ ಕೂಡಾ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.