ಪ್ರವೀಣ್ ಕೊಲೆ ಪ್ರಕರಣ; ಹತ್ಯಾಕಾಂಡಗಳಿಗೆ ಕೊನೆ ಎಂದು..? – ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು; ರಾಜ್ಯದಲ್ಲಿ ಯುವಕರ ಕೊಲೆಗಳ ಸರಣಿಯೇ ಮುಂದುವರಿದಿದ್ದು, ಇನ್ನೊಂದು ಜೀವ ಹೋಗಿದೆ. ಈ ಹತ್ಯಾಕಾಂಡಕ್ಕೆ ಕೊನೆಯೇ ಇಲ್ಲವೇ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಈ ಬಗ್ಚಗೆ ಸರಣಿ ಟ್ವೀಟ್ ಮಾಡಿದ್ದು, ಪ್ರವೀಣ್ ಕೊಲೆಯನ್ನು ಖಂಡಿಸಿದ್ದಾರೆ.
ಕುಮಾರಸ್ವಾಮಿಯವರ ಸರಣಿ ಟ್ವೀಟ್‌ಗಳ ವಿವರ ಇಲ್ಲಿದೆ:
ಟ್ವೀಟ್-೧
ರಾಜ್ಯದಲ್ಲಿ ಯುವಕರ ಕೊಲೆಗಳ ಸರಣಿಯೇ ಮುಂದುವರಿದಿದ್ದು, ಇನ್ನೊಂದು ಜೀವ ಹೋಗಿದೆ. ಈ ಹತ್ಯಾಕಾಂಡಕ್ಕೆ ಕೊನೆಯೇ ಇಲ್ಲವೇ? ಕೊಲೆ ಅದ ಮೇಲೆ ನಡೆಯುವ ಹೇಳಿಕೆಗಳ ಭರಾಟೆ, ಕೂಗಾಟದಿಂದ ಪ್ರಯೋಜನ ಏನು? ಶಿವಮೊಗ್ಗದಲ್ಲಿ ಹರ್ಷ ಕೊಲೆ ಅದ ಮೇಲೆ @BJP4Karnataka ಸರಕಾರ ಮೈಮರೆತಿದ್ದು ಯಾಕೆ?
ಟ್ವೀಟ್-೨
ಪ್ರತಿ ಕೊಲೆ ಅದ ಮೇಲೆಯೂ ಮೈ ಕೊಡವಿಕೊಂಡು ಎದ್ದೇಳುವ @BJP4Karnataka ಸರಕಾರ, ಕೊಲೆಯೇ ಆಗದಂತೆ ತಡೆಯುವ ಪ್ರಯತ್ನ ಮಾಡುತ್ತಿಲ್ಲ, ಏಕೆ? ಕೊಲೆಗಳೆಂದರೆ ಕೆಲವರಿಗೇಕೆ ಇಷ್ಟೊಂದು ಇಷ್ಟ? ಚುನಾವಣೆ ಹತ್ತಿರ ಆದಂತೆಲ್ಲ ನೆತ್ತರ ಓಕುಳಿ ಹರಿಯುತ್ತಿದೆ! ಈ ನೆತ್ತರ ಮೇಲೆ ರಾಜಕೀಯ ಆಟ ವಿಜೃಂಭಿಸುತ್ತಿದೆ.
ಟ್ವೀಟ್-೩
ಈ ಮೊದಲು ಕೊಲೆಯಾಗಿದ್ದ ಮಸೂದ್ ಕೂಡ ಬಡವ, ಈಗ ಕೊಲೆಯಾದ ಪ್ರವೀಣ್ ನೆಟ್ಟಾರು ಕೂಡ ಬಡ ಕುಟುಂಬದವರೇ. ಶ್ರಮಜೀವಿಗಳ ಕುಟುಂಬದ ಮಕ್ಕಳೇ ಸಾವಿಗೆ ತುತ್ತಾಗುತ್ತಿದ್ದಾರೆ! ರಾಜಕಾರಣಿಗಳು, ಸಂಘಟನೆಗಳ ಮುಖಂಡರ ಮಕ್ಕಳು ಇಂಥ ಗಲಾಟೆಗಳಲ್ಲಿ ಕಾಣೋದೇ ಇಲ್ಲ!
ಟ್ವೀಟ್-೪
ರಾಜ್ಯದಲ್ಲಿ ಕೆಲ ಸಂಘಟನೆಗಳು ಬಡ ಯುವಕರನ್ನು ದಾರಿ ತಪ್ಪಿಸಿ ಸ್ವಾರ್ಥ ಸಾಧನೆಗಾಗಿ ಸಾವಿನ ದವಡೆಗೆ ದೂಡುತ್ತಿವೆ. ಬಡ ಕುಟುಂಬಗಳ ಜೀವನಾಧಾರವಾಗಿರುವ ಯುವಕರನ್ನು ಬಲಿ ತೆಗೆದುಕೊಳ್ಳುತ್ತವೆ. ಈ ಬಗ್ಗೆ ಯುವಕರು, ಪೋಷಕರು ಎಚ್ಚೆತ್ತುಕೊಳ್ಳಬೇಕು.
ಟ್ವೀಟ್-೫
ಹಿಂಸೆಗೆ ಜಾತಿ, ಧರ್ಮ ಎಂಬುದಿಲ್ಲ. ರಕ್ತಪಿಪಾಸುಗಳಿಗೆ ಮಾನವೀಯತೆ ಇಲ್ಲ. ಕೊಲೆಗೆಡುಕ ಶಕ್ತಿಗಳ ಮುಂದೆ ಸರಕಾರ ಕೋಲೆ ಬಸವನಂತೆ ಆಗಿದೆ. ಈ ಕೊಲೆಗಳ ಹಿಂದಿರುವ ಕಾಣದ ಕೈಗಳಿಗೆ ಕೊಳ ಹಾಕಲು ದೈರ್ಯ ಇಲ್ಲ. ಈ ಅಸಹಾಯಕತೆಗೆ ಕಾರಣ ಏನು?
ಟ್ವೀಟ್-೬
ಅಂಕೆಯೇ ಇಲ್ಲದ ಹಂತಕರ ಆಟಕ್ಕೆ ಇತಿಶ್ರೀ ಹಾಡಿ, ಹೆಡೆಮುರಿ ಕಟ್ಟಬೇಕು. ಅದು ಬಿಟ್ಟು ಅಬ್ಬರದ ಹೇಳಿಕೆಗಳಿಂದ ಉಪಯೋಗವೇನು? ಪ್ರತಿ ಕೊಲೆಗೂ ಕೋಮು ಬಣ್ಣ ಹಚ್ಚುವ ನಾಯಕರ ರಾಜಕೀಯ ತಲೆಯಲ್ಲಿ ಭಯಂಕರ ದುರುದ್ದೇಶವೇ ಅಡಗಿದೆ.
ಟ್ವೀಟ್-೮
ಕರ್ನಾಟವು ಸರ್ವ ಜನಾಂಗದ ಶಾಂತಿಯ ತೋಟ. ಶಾಂತಿ, ಸೌಹಾರ್ದತೆ, ಸಹಿಷ್ಣುತೆಯ ಬೀಡು. ಭಾವನಾತ್ಮಕ ವಿಷಯಗಳಿಂದ ಬಂಡವಾಳ ಹೂಡಿಕೆಯಲ್ಲಿ ಈಗಾಗಲೇ ರಾಜ್ಯಕ್ಕೆ ಹೊಡೆತ ಬಿದ್ದಿದೆ. ಹೊಸ ಕೈಗಾರಿಕೆಗಳು ಬರುತ್ತಿಲ್ಲ.
ಟ್ವೀಟ್-೮
ಶಾಂತಿ, ಸುವ್ಯಸ್ಥೆ ಸಮಸ್ಯೆಯಿಂದ ಆರ್ಥಿಕ ಹಿಂಜರಿತ ಉಂಟಾಗಿ ಕೈಗಾರಿಕೆಗಳು ವಲಸೆ ಹೋದರೆ ಎದುರಾಗುವ ನಿರುದ್ಯೋಗ ಸಮಸ್ಯೆಗೆ ಯಾರು ಹೊಣೆ ಆಗುತ್ತಾರೆ? ನಿರುದ್ಯೋಗವೇ ಇಂಥ ಘಟನೆಗಳಿಗೆ ಕಾರಣ. ಹತಾಶ ಯುವಕರ ಮನಸ್ಸು ಕೆಡಿಸಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು.