ಪ್ರತಾಪ ಸಿಂಹ, ಸಿ.ಟಿ.ರವಿ ತೆರೆ ಹಿಂದೆ ನಿಂತು ಕಲ್ಲು ಹೊಡೆಯೋ ಜೋಡಿ; ಕಾಂಗ್ರೆಸ್
ಬೆಂಗಳೂರು; ಬಿಜೆಪಿಯಲ್ಲಿ ಸೋಲಿನ ಅವಲೋಕನ ನಡೆಯುತ್ತಿದೆ. ಈ ನಡುವೆ ಸಂಸದ ಪ್ರತಾಪ ಸಿಂಹ ಹಾಗೂ ಸಿ.ಟಿ.ರವಿಯವರು ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಜೊತೆ ಕೆಲ ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದರು ಎಂಬಂತೆ ಮಾತನಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಕಾಂಗ್ರೆಸ್ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಸಿ.ಟಿ.ರವಿ ಹಾಗೂ ಪ್ರತಾಪ ಸಿಂಹ ವಿರುದ್ಧ ಕಿಡಿಕಾರಿದೆ.
ಕಾಂಗ್ರೆಸ್ ಸರಣಿ ಟ್ವೀಟ್‌ನಲ್ಲಿ ಏನಿದೆ..?
ಟ್ವೀಟ್-೧;
ಬಿಜೆಪಿಯಲ್ಲಿ ಸೋಲಿನ ಅವಲೋಕನ ಚೆನ್ನಾಗಿಯೇ ನಡೆಯುತ್ತಿದೆ! ಬೊಮ್ಮಾಯಿ ಹಾಗೂ @BSYBJP ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿರುವ @mepratap @CTRavi_BJP ಅವರ ಹೇಳಿಕೆಗಳ ಹಿಂದಿರುವುದು ಮತ್ತದೇ ಜೋಶಿ, ಸಂತೋಷ್ ಜೋಡಿ. ಸೋಲಿನ ನಂತರ ನಾಪತ್ತೆಯಾಗಿರುವ ಈ ಜೋಡಿ ತೆರೆಯ ಹಿಂದೆ ನಿಂತು ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಟ್ವೀಟ್-೨
ರಿಟೈರ್ಡ್ ಹರ್ಟ್ ಆಗಿರುವ @CTRavi_BJP ಈಗ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ, ಅವರ ಅರಣ್ಯ ರೋಧನಕ್ಕೆ @mepratap ದನಿ ಜೋಡಿಸಿದ್ದಾರೆ. ಇಬ್ಬರಿಗೂ ದಮ್ಮು ತಾಕತ್ತು ಇದ್ದರೆ ಅಡ್ಜಸ್ಟಮೆಂಟ್ ಮಾಡಿಕೊಂಡ ತಮ್ಮ ಪಕ್ಷದ ನಾಯಕರ ಹೆಸರು ಹೇಳಿ ಆರೋಪಿಸಲಿ. ಅಂದಹಾಗೆ ಬಿಜೆಪಿಯೊಂದಿಗೆ ಅಡ್ಜಸ್ಟ್ ಮಾಡಿಕೊಂಡಿದ್ದ ಕುಮಾರಸ್ವಾಮಿ ತಲೆ ಸವರಿಕೊಂಡು ನಗುತ್ತಿದ್ದಾರಂತೆ ಅಲ್ಲವೇ @BJP4Karnataka?
ಟ್ವೀಟ್-೩
ಮಾನ್ಯ @mepratap ಅವರೇ, ಇಷ್ಟಕ್ಕೂ ನಿಮ್ಮ ಸರ್ಕಾರ ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಗೆ ಅನುಮತಿ ನೀಡಿದ್ದೇಕೆ ಎಂಬುದನ್ನು ರಾಜ್ಯದ ಜನತೆಗೆ ಉತ್ತರಿಸಿ. ನಿಮ್ಮವರೇ ಆದ ಮಾಜಿ ಸಿಎಂ @BSBommai ಅವರು KERC ನಿರ್ಧಾರದಲ್ಲಿ ಸರ್ಕಾರಕ್ಕೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ, ಈ ಬಗ್ಗೆ ಅವರನ್ನು ಕೇಳಿ ಬಂದು ಮಾತನಾಡಿ.