ರಾಹುಲ್ ಗಾಂಧಿ ವಿರುದ್ಧ ಸೇಡಿನ ರಾಜಕಾರಣ; ಕೇಂದ್ರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಬೆಂಗಳೂರು; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಿದ್ದೇ ಅಲ್ಲದೆ, ಅವರ ವಿರುದ್ಧ ಸೇಡಿನ ರಾಜಕಾರಣ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಇಂದು ದೇಶಾದ್ಯಂತ ಮೌನ ಪ್ರತಿಭಟನೆಗೆ ಕರೆ ನೀಡಿದೆ. ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಇಂದು ಮೌನ ಪ್ರತಿಭನಟನೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಕೂಡಾ ಕೆಪಿಸಿಸಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಮೌನ ಪ್ರತಿಭಟನೆ ನಡೆಸಲಾಗುತ್ತಿದೆ. ಇಂದು ಸಂಜೆ 4 ಗಂಟೆಯವರೆಗೂ ಪ್ರತಿಭಟನೆ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ , ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ನಾಯಕರು ಭಾಗವಹಿಸುತ್ತಿದ್ದಾರೆ. ರಣದೀಪ್ ಸುರ್ಜೇವಾಲಾ ಕೂಡಾ ಬೆಂಗಳೂರಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಸಚಿವರುಗಳಾದ ಪ್ರಿಯಾಂಕ ಖರ್ಗೆ, ಸತೀಶ್ ಜಾರಕಿಹೊಳಿ, ಶರಣ ಬಸಪ್ಪ, ಸಂತೋಷ್ ಲಾಡ್, ಶಾಸಕರಾದ ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ತುಕಾರಾಂ, ಮಹಂತೇಶ್, ಯುಬಿ ಬಣಕಾರ್, ಬಸವರಾಜ್ ದದ್ದಲ್, ಭೀಮ್ ಸೇನ್ ಸೇರಿದಂತೆ ಹಲವರು ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಉಳಿದಂತೆ ಕಾಂಗ್ರೆಸ್‌ನ ಎಲ್ಲಾ ಶಾಸಕರು, ಮಾಜಿ ಶಾಸಕರುಗಳು, ಪದಾಧಿಕಾರಿಗಳು ಕೂಡಾ ಪ್ರತಿಭಟನೆಯಲ್ಲಿರಲಿದ್ದಾರೆ.