ಬಿಜೆಪಿ ಕಾರ್ಯಕರ್ತರ ಜೊತೆ ಪ್ರಧಾನಿ ಸಂವಾದ; ದಾಖಲೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮೋದಿ
ನವದೆಹಲಿ; ಕರ್ನಾಟಕದಲ್ಲಿ ಬಿಜೆಪಿಗೆ ತಳಮಟ್ಟದಲ್ಲಿ ಕಾರ್ಯಕರ್ತರ ಪಡೆ ಇದ್ದು, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ದಾಖಲೆ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಜೊತೆ ಆನ್ಲೈನ್ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿ ಬೂತ್ ಮಟ್ಟದಲ್ಲಿ ಟೀಂ ಆಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಪ್ರಧಾನಿ ಕರೆ ನೀಡಿದ್ದಾರೆ.
ಭಾರತದ ಸ್ಟಾರ್ಟ್ ಅಪ್ ಕ್ರಾಂತಿಯ ನೇತೃತ್ವವನ್ನು ಕರ್ನಾಟಕ ವಹಿಸಿದೆ. ಕರ್ನಾಟಕದ ಯುವ ಜನತೆಗೆ ಉತ್ತಮ ಭವಿಷ್ಯವಿದೆ. ಎಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಸಂಭ್ರಮಿಸಬೇಕಿದೆ ಎಂದು ಪ್ರಧಾನಿ ಮೋದಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಹತ್ತು ಪುರುಷರು, ಹತ್ತು ಮಹಿಳಾ ಕಾರ್ಯಕರ್ತರ ಒಂದೊಂದು ಗುಂಪು ಮಾಡಿ ಮನೆಮನೆಗೂ ತೆರಳಬೇಕು. ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಬೇಕು. ಮಕ್ಕಳು, ವೃದ್ಧರನ್ನು ಪ್ರೀತಿಯಿಂದ ಮಾತನಾಡಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಬಡತನ ಮುಕ್ತ ದೇಶ ಮಾಡೋದೇ ನಮ್ಮ ಗುರಿ. ಅದಕ್ಕಾಗಿ ಬಿಜೆಪಿ ಸದಾ ಶ್ರಮಿಸುತ್ತದೆ. ಡಬಲ್ ಎಂಜಿನ್ ಸರ್ಕಾರವಿರುವ ರಾಜ್ಯಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಹೀಗಾಗಿ ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಇದರಿಂದ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಮೋದಿ ಹೇಳಿದ್ದಾರೆ. ಕೊರೊನಾ ವೇಳೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾದವು. ಇದರಿಂದ ಹಲವಾರು ದೇಶಗಳು ಸಂಕಷ್ಟ ಎದುರಿಸಿದವು. ಆದ್ರೆ ನಾವು ಕೊರೊನಾ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.
2014 ಕ್ಕಿಂತ ಮೊದಲು ಬಡವರಿಗೆ ಒಂದು ಮನೆ ನಿರ್ಮಿಸಿಕೊಡಲು 300 ದಿನ ತೆಗೆದುಕೊಳ್ಳುತ್ತಿತ್ತು. ಆದ್ರೆ ನಾವು ನೂರೇ ದಿನದಲ್ಲಿ ಮನೆ ನಿರ್ಮಿಸಿಕೊಟ್ಟಿದ್ದೇವೆ. ಏಮ್ಸ್ಗಳು, ಮೆಡಿಕಲ್ ಕಾಲೇಜುಗಳನ್ನು ಹೆಚ್ಚಳ ಮಾಡಿದ್ದೇವೆ. ಜನರ ಆರೋಗ್ಯ ಹಾಗೂ ಶಿಕ್ಷಣದ ಕಡೆ ನಾವು ಹೆಚ್ಚು ಗಮನ ಕೊಟ್ಟಿದ್ದೇನೆ. ಆದ್ರೆ ಕಾಂಗ್ರೆಸ್ನಿಂದ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ಆಗಿದೆ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕ ಹನುಮನ ಜನ್ಮಸ್ಥಳ ಹಾಗೂ ಸಾಂಸ್ಕೃತಿಕ ಪ್ರದೇಶವಾಗಿದೆ. ಆಧ್ಯಾತ್ಮಿಕತೆ ಹಾಗೂ ಸಮಾಜ ಒಗ್ಗೂಡಿಸಿಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೋದಿಯವರು ಕರ್ನಾಟಕವನ್ನು ಹೊಗಳಿದರು.
ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಕೊಡುತ್ತಿದೆ. ಆದ್ರೆ ಕಾಂಗ್ರೆಸ್ ಅಂದ್ರೇನೇ ಭ್ರಷ್ಟಾಚಾರ. ಅದರ ವಾರೆಂಟಿ ಈಗಾಗಲೇ ಎಕ್ಸ್ಪೈರ್ ಆಗಿದೆ ಎಂದು ಮೋದಿ ಇದೇ ವೇಳೆ ಹೇಳಿದ್ದಾರೆ.