ಆಂಧ್ರಪ್ರದೇಶ ಯುವ ಕಾಂಗ್ರೆಸ್ ಉಸ್ತುವಾರಿ ರಕ್ಷಾ ರಾಮಯ್ಯ ಹೆಗಲಿಗೆ..
ಬೆಂಗಳೂರು; ರಕ್ಷಾ ರಾಮಯ್ಯಗೆ ಮತ್ತೊಂದು ಜವಾಬ್ದಾರಿ ಸಿಕ್ಕಿದೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಎಂ.ಎಸ್. ರಕ್ಷಾ ರಾಮಯ್ಯ ಅವರಿಗೆ ಆಂಧ್ರ ಪ್ರದೇಶ ರಾಜ್ಯದ ಯುವ ಕಾಂಗ್ರೆಸ್ ಉಸ್ತುವಾರಿ ನೀಡಲಾಗಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ನ ಹಲವು ಪದಾಧಿಕಾರಿಗಳಿಗೆ ವಿವಿಧ ರಾಜ್ಯಗಳ ಜವಾಬ್ದಾರಿ ವಹಿಸಲಾಗಿದೆ. ಅದರಂತೆ ರಕ್ಷಾ ರಾಮಯ್ಯ ಅವರಿಗೆ ಪಕ್ಕದ ಆಂಧ್ರಪ್ರದೇಶದಲ್ಲಿ ಯುವ ಕಾಂಗ್ರೆಸ್ ವ್ಯವಹಾರಗಳನ್ನು ನೋಡಿಕೊಳ್ಳುವ ಉಸ್ತುವಾರಿ ವಹಿಸಲಾಗಿದೆ. ಆಂಧ್ರಪ್ರದೇಶದಲ್ಲಿ ರಕ್ಷಾ ರಾಮಯ್ಯರ ಬಲಿಜ ಸಮುದಾಯ ಹೆಚ್ಚಾಗಿದ್ದು, ಓಟ್ ಬ್ಯಾಂಕ್ ದೃಷ್ಟಿಯಲ್ಲಿಟ್ಟುಕೊಂಡು ಈ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ರಕ್ಷಾ ರಾಮಯ್ಯ, ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಬೇರುಗಳು ಗಟ್ಟಿಯಾಗಿದ್ದು, ಯುವ ಕಾಂಗ್ರೆಸ್ ಮೂಲಕ ಪಕ್ಷವನ್ನು ಮತ್ತಷ್ಟು ಸದೃಢ ಮತ್ತು ಪ್ರಬಲವಾಗಿ ಸಂಘಟಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಎಲ್ಲರ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದಿದ್ದಾರೆ.