Bengaluru

ಮುಂಬರುವ ಲೋಕಸಭಾ ಚುನಾವಣೆ; ಮತ ಎಣಿಕೆಗೆ ನಿಗದಿಪಡಿಸಿದ ಕೇಂದ್ರಗಳ ಪರಿಶೀಲನೆ

ಮುಂಬರುವ ಲೋಕಸಭಾ ಚುನಾವಣೆ-2024ರ ಸಂಬಂಧ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಇಂದು ಮೂರು ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲೋಕಸಭಾ ಚುನಾವಣೆಯ ಸಂಬಂಧ ಮತ ಎಣಿಕೆ ಕೇಂದ್ರಗಳ ಬಳಿ‌ ಏನೆಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಚುನಾವಣಾ ಆಯೋಗ ನೀಡುವ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮತ ಎಣಿಕೆ ಕೇಂದ್ರಗಳು ಯಾವ ರೀತಿ ಇರಬೇಕು, ಬ್ಯಾರಿಕೇಟ್ ಅನ್ನು ಯಾವ ರೀತಿ ಅಳವಡಿಸಬೇಕು, ಆರ್.ಒ‌ ಕಛೇರಿ, ಮಾಧ್ಯಮ ಕೇಂದ್ರ ಸ್ಥಾಪನೆ, ಅಧಿಕಾರಿಗಳು ಹಾಗೂ‌ ನಾಗರೀಕರು ಹೋಗುವ/ಬರುವ ವ್ಯವಸ್ಥೆ, ಮೂರು ಹಂತದ ಭದ್ರತೆ, ಸ್ಟ್ರಾಂಗ್ ರೂಂ, ಮತ ಎಣಿಕೆ ಕೊಠಡಿಗಳಲ್ಲಿ ಟೇಬಲ್ ಗಳ ಅಳವಡಿಕೆ, ಸಿಸಿ‌ ಟಿವಿ ಅಳವಡಿಕೆ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳು ಸರಿಯಾದ ಕ್ರಮದಲ್ಲಿರಬೇಕೆಂದು ಸೂಚನೆ ನೀಡಿದರು.

ಈ ಬಾರಿಯ ಲೋಕ ಸಭಾ ಚುನಾವಣೆಯು ಯಾವುದೇ ಗೊಂದಲಗಳಿಗೆ ಆಸ್ಪದ ನೀಡಲು ಅವಕಾಶ ನೀಡಬಾರದು. ಯಾವುದೆ ತೊಂದರೆಗಳಿಲ್ಲದೆ ಸುಸೂತ್ರವಾಗಿ‌ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.

ಮೂರು ಮತ ಎಣಿಕೆ ಕೇಂದ್ರಗಳ‌ ವಿವರ:

1. ಬೆಂಗಳೂರು ಕೇಂದ್ರ :- ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ, ಬೆಂಗಳೂರು.

2. ಬೆಂಗಳೂರು ನಗರ :- ಸೆಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆ, ಬೆಂಗಳೂರು.

3. ಬೆಂಗಳೂರು ದಕ್ಷಿಣ :- ಎಸ್.ಎಸ್.ಎಂ.ಆರ್.ವಿ ಕಾಲೇಜು, 9ನೇ ಬ್ಲಾಕ್, ಜಯನಗರ, ಬೆಂಗಳೂರು.

ಪರಿಶೀಲನೆಯ ವೇಳೆ ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಕೆ. ಹರೀಶ್ ಕುಮಾರ್, ಡಾ. ದಯಾನಂದ್, ವಿನೋತ್ ಪ್ರಿಯಾ, ಚುನಾವಣಾ ವಿಭಾಗದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share Post